ಬೆಂಗಳೂರು: ಹುಬ್ಬಳ್ಳಿ ಘಟನೆಯನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ತಡರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಕಹಿ ಘಟನೆಗಳು ತೀವ್ರ ಆಘಾತ ಉಂಟು ಮಾಡಿವೆ. ಕರ್ನಾಟಕದ ಶಾಂತಿ, ಸಾಮರಸ್ಯ ಹಾಳು ಮಾಡುವ ದುಷ್ಪ್ರಯತ್ನಗಳು ಕಳವಳಕಾರಿಯಾಗಿದೆ ಎಂದು ಕುಮಾರಸ್ವಾಮಿ ಟ್ವಿಟರ್ ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಧರ್ಮ, ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ಪ್ರವೃತ್ತಿ ಸರಿಯಲ್ಲ ಎಂದಿದ್ದಾರೆ.
ಈದ್ಗಾ ಮೈದಾನದ ವಿವಾದಕ್ಕೆ ತೆರೆಬಿದ್ದ ನಂತರ ಹುಬ್ಬಳ್ಳಿಯಲ್ಲಿ ಜನ ನೆಮ್ಮದಿಯಿಂದ ಇದ್ದರು. ಇದೀಗ ಅಲ್ಲಿ ಶಾಂತ ವಾತಾವರಣ ಕದಡುವ ಷಡ್ಯಂತ್ರವನ್ನು ಮಾಡಲಾಗಿದೆ ಇದನ್ನು ಯಾರೂ ಸಹಿಸಬಾರದು ಎಂದಿದ್ದಾರೆ.
ಸಾಮರಸ್ಯ ಮೂಡಿಸಬೇಕಾದ ಜಾಲತಾಣದಲ್ಲಿ ಒಂದು ಧರ್ಮದ ಯುವಕ ಹಂಚಿಕೊಂಡ ಪ್ರಚೋದನಾತ್ಮಕ ಪೋಸ್ಟ್ ರಾದ್ಧಾಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಕಿಡಿಗೇಡಿ, ತಿಳಿಗೇಡಿ ಯುವಕನ ಕೃತ್ಯದಿಂದ ಉದ್ರಿಕ್ತಗೊಂಡ ಇನ್ನೊಂದು ಸಮುದಾಯದ ಕೆಲವರು ರಾತ್ರಿಯೆಲ್ಲ ಹುಬ್ಬಳ್ಳಿಯಲ್ಲಿ ಬೀಭತ್ಸ ಸೃಷ್ಟಿಸಿ ದ್ವೇಷದ ಬೆಂಕಿಗೆ ಪೆಟ್ರೋಲ್ ಸುರಿಯದೇ ಸಹನೆ ಮೆರೆಯಬೇಕಿತ್ತು ಎಂದು ಎಚ್ ಡಿ ಕೆ ಅಭಿಪ್ರಾಯ ಪಟ್ಟಿದ್ದಾರೆ.
ಪೊಲೀಸರ ಮೇಲೆ ದಾಳಿ, ಠಾಣೆ, ಆಸ್ಪತ್ರೆ ಮೇಲೆ ಕಲ್ಲುಗಳನ್ನು ಎಸೆದು ಹಾನಿ ಮಾಡಬಾರದಿತ್ತು ಎಂದು ತಿಳಿಸಿದ್ದಾರೆ.
ಕಿಡಿಗೇಡಿ ಯುವಕನ ಬಂಧನವಾಗಿದೆ. ಕಾನೂನು ಅವನನ್ನು ನೋಡಿಕೊಳ್ಳುತ್ತದೆ. ಇನ್ನೊಂದು ಸಮುದಾಯವು ಕಾನೂನನ್ನು ಕೈಗೆತ್ತಿಕೊಳ್ಳದೆ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟು ಸಹನೆಯಿಂದ ವರ್ತಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

