ಜಲ ಸಂಪನ್ಮೂಲಕ್ಕೆ ಕೊರತೆ ಇಲ್ಲ : ಅದರ ಬಳಕೆಗೆ ಬಿಜೆಪಿ, ಕಾಂಗ್ರೆಸ್ ಸಹಕಾರ ಕೊಡುತ್ತಿಲ್ಲ ದೇವೇಗೌಡರ ಬೇಸರ

ಎಚ್.ಡಿ.ಕೋಟೆ: ರಾಜ್ಯದಲ್ಲಿ ಜಲ ಸಂಪನ್ಮೂಲಕ್ಕೆ ಕೊರತೆ ಇಲ್ಲ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಿಜೆಪಿ ಹಾಗೂ ಕಾಂಗ್ರೆಸ್ ಸಹಕಾರ ಕೊಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಬೇಸರ ವ್ಯಕ್ತಪಡಿಸಿದರು.

ಎಚ್. ಡಿ. ಕೋಟೆಯ ಕಬಿನಿ ಡ್ಯಾಂ ಬಳಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನನಗೆ 90 ವರ್ಷವಾಗಿದ್ದು, ಇನ್ನೂ ಹೋರಾಟ ಮಾಡುವ ಆಸೆ ಇದೆ. ನಾನು ಶಕ್ತಿ ಮೀರಿ ಈ ಭಾಗದ ಜನತೆಗೆ ನೀರಿಗಾಗಿ ಹೋರಾಟ ಮಾಡಿದ್ದೇನೆ. ಈಗಲೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ಕಾವೇರಿ, ಕಬಿನಿ, ಕೃಷ್ಣ ಸೇರಿದಂತೆ ಬಹುತೇಕ ಅಂತಾರಾಜ್ಯ ನದಿಗಳಿವೆ.  ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ ಅಂತ ನಾನು ರಾಜ್ಯಸಭೆಯಲ್ಲಿ ಕೈಮುಗಿದು ಮನವಿ ಮಾಡಿದ್ದೇನೆ. ನಮಗೆ ಯಾವ ಪಕ್ಷದವರೂ ಸಹಕಾರ ಕೊಡುತ್ತಿಲ್ಲ ಎಂದು ಅಸಮಾಧಾನ ಪಟ್ಟರು.

ನಮ್ಮದು ಒಂದು ಪ್ರಾದೇಶಿಕ ಪಕ್ಷ: ಜನರಿಗೆ ಜಾಗೃತಿ ಬಂದರೆ ಸಹಜವಾಗಿ ಒಳ್ಳೆಯ ಆಯ್ಕೆ ಮಾಡುತ್ತಾರೆ. ಆದ್ದರಿಂದ ಜಲಧಾರೆ ಯಾತ್ರೆ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಗೌಡರು ತಿಳಿಸಿದರು.

ಟ್ರಿಬ್ಯುನಲ್ ಅಕ್ಟ್ ಬಗ್ಗೆ ಬಿಜೆಪಿ ಆಗಲಿ ಕಾಂಗ್ರೆಸ್ ನವರಾಗಲಿ ಮಾತನಾಡಿಲ್ಲ ಇದು ನಮ್ಮ ರಾಜ್ಯದ ದುರಾದೃಷ್ಟ. ನೀರಾವರಿ ವಿಚಾರದಲ್ಲಿ ನಮ್ಮ ಪರ ಯಾರು ಇಲ್ಲ. ಕರ್ನಾಟಕಕ್ಕೆ  ನೀರಾವರಿ ವಿಚಾರದಲ್ಲಿ ವಂಚನೆ ಆಗುತ್ತಿದೆ‌ ಎಂದು ದೂರಿದರು.

ನಾನು ಒಬ್ಬ ರೈತನಾಗಿ ಈ ಕಾರ್ಯಕ್ರಮದಲ್ಲಿ ಭಾಗಿ ಯಾಗಿದ್ದೇನೆ. ನನ್ನ ಕಾಲಿನಲ್ಲಿ ಶಕ್ತಿ ಇಲ್ಲ. ಆದರೂ ನನ್ನ ತಲೆಯಲ್ಲಿ ಶಕ್ತಿ ಇದೆ ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳಿದರು.

ಪರ್ಸೆಂಟೇಜ್ ಚರ್ಚೆ ವಿಚಾರ ರಾಜಕಾರಣದಲ್ಲಿ ಯಾರೂ ಸತ್ಯವಂತರು ? ಅವರ ಮೇಲೆ ಇವರು, ಇವರ ಮೇಲೆ ಅವರು ಮಾತನಾಡುತ್ತಾರೆ. ಕಾಂಗ್ರೆಸ್ ‌ನವರು ಏನೂ ಮಾಡಿಯೇ ಇಲ್ವೇ, ಯಾರು ಸಾಚ ಇದ್ದಾರೆ ಹೇಳಿ ಎಂದು ದೇವೇಗೌಡರು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಇದ್ದಾಗ 10 ಪರ್ಸೆಂಟೇಜ್ ಸರ್ಕಾರ ಅಂತ ಪ್ರಧಾನಿಯೇ ಆರೋಪ ಮಾಡಿದ್ದರು.ಆಗಲೂ ನಾನು ಆರೋಪ ಮಾಡಲಿಲ್ಲ. ಈಗಲೂ ಅಷ್ಟೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ಕೊಡಲ್ಲ. ಭ್ರಷ್ಟಾಚಾರ ಎಲ್ಲ ಕಡೆ ತುಂಬಿ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜಕಾರಣ ಹೇಳಲಾಗದಷ್ಟು ಕೆಟ್ಟು ಹೋಗಿದೆ.ನೀರಿನ ವಿಚಾರ ಬಂದಾಗ ತಮಿಳುನಾಡಿನ ಎಲ್ಲ ಪಕ್ಷಗಳೂ ಒಂದಾಗುತ್ತವೆ. ಆದರೆ ನಮ್ಮ ರಾಜ್ಯದಲ್ಲಿ ಯಾರೂ ಒಂದಾಗಲ್ಲ‌ ಎಂದು ಬಹಳ ಬೇಸರಪಟ್ಟರು ಗೌಡರು.

ಮಹದಾಯಿ ವಿಚಾರದಲ್ಲೂ ಸಾಕಷ್ಟು ನೋವಿದೆ. ಇದರ ಬೆನ್ನಲ್ಲೇ ಕೇಂದ್ರ ಜಲ ಸಂಪನ್ಮೂಲ ಸಚಿವರು

ನನಗೆ ಮೂರು ಬಾರಿ ಅಪಾಯಿಂಟ್ಮೆಂಟ್ ಕೊಟ್ಟರು,ಆದರೆ ಮನೆಗೆ ಹೋದಾಗ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.