ಮೈಸೂರು: ಭ್ರಷ್ಟಾಚಾರದ ವಿಚಾರ ಗೊತ್ತಿದ್ದರೂ ಅದನ್ನು ಮುಚ್ಚಿಡುವುದು ಅಫೆನ್ಸ್ ಆಗುತ್ತದೆ ಎಂಬುದು ಸರ್ಕಾರಕ್ಕೆ ಗೊತ್ತಿಲ್ಲವೆ ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.
ಪಿ ಎಸ್ ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದು ಅಕ್ರಮ ನಡೆದಿದೆ ಎಂದು ನನ್ನ ಬಳಿ ಕೂಡ ಕೆಲವರು ಬಂದು ಹೇಳಿದ್ದರು. ನಾನು ಸಂಬಂಧಪಟ್ಟವರಿಗೆ ತನಿಖೆ ನಡೆಸುವಂತೆ ಹೇಳಿದ್ದೆ ತನಿಖೆ ನಡೆಯುತ್ತಿದೆ, ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆಯಾಗಲಿ ಎಂದು ಹೇಳಿದರು.
ಕಾಂಗ್ರೆಸ್ ನವರ ಭ್ರಷ್ಟಾಚಾರದ ಕಡತ ತೆಗೆಯುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಬಿಜೆಪಿಯವರು ಇಲ್ಲಿವರೆಗೆ ಕಡ್ಲೆಪುರಿ ತಿನ್ನುತ್ತಿದ್ರಾ ಎಂದು ಸಿದ್ದು ಖಾರವಾಗಿ ಪ್ರಶ್ನಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದು ಎಷ್ಟು ವರ್ಷ ಆಯ್ತು. ಹಿಂದೆ ಐದು ವರ್ಷ ವಿರೋಧ ಪಕ್ಷದಲ್ಲಿ ಇರಲಿಲ್ಲವಾ. ಆಗ ಯಾಕೆ ಈ ಭ್ರಷ್ಟಾಚಾರದ ಮಾತು ಹೇಳಲಿಲ್ಲ ಎಂದರು.
ಈಗ ನಾವು ನಿಮ್ಮ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಈ ಮಾತು ಹೇಳಿದರೆ ಜನ ನಂಬುತ್ತಾರಾ, ಭ್ರಷ್ಟಾಚಾರ ವಿಚಾರ ಗೊತ್ತಿದ್ದರೂ ಮುಚ್ಚಿಡುವುದು ಅಫೆನ್ಸ್. ಇದು ಸರ್ಕಾರಕ್ಕೆ ಗೊತ್ತಿಲ್ಲವಾ? ಜನರಿಗೆ ಇದೆಲ್ಲವೂ ಅರ್ಥವಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

