ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಕಟ್ಟಡ ನೆಲಸಮ ವಿರೋಧಿಸಿ ಪಾದಯಾತ್ರೆ

ಮೈಸೂರು: ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡ ನೆಲಸಮ ಮಾಡುವುದನ್ನು ವಿರೋಧಿಸಿ ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ನೇತೃತ್ವದಲ್ಲಿ ವರ್ತಕರು ಬುಧವಾರ ಪಾದಯಾತ್ರೆ ನಡೆಸಿದರು.

ನಗರದ ಚಿಕ್ಕ ಗಡಿಯಾರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ವರ್ತಕರು ದೇವರಾಜ ಮಾರುಕಟ್ಟೆಯನ್ನು ಮಧ್ಯಾಹ್ನದ ವರೆಗೆ  ಅಂಗಡಿಗಳನ್ನು ಬಂದ್ ಮಾಡಿ ಪಾದಯಾತ್ರೆ ನಡೆಸಿದರು.

ಚಾಮರಾಜ ಒಡೆಯರ್ ಅವರು ಕಟ್ಟಿಸಿರುವ ಕಟ್ಟಡ ಉಳಿಸಿಕೊಳ್ಳಲು ಹೋರಾಟ ನಡೆಸಿದ್ದೇವೆ ಎಂದು ಪಾದಯಾತ್ರೆ ವೇಳೆ  ವರ್ತಕರು ತಿಳಿಸಿದರು.

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪಾದಯಾತ್ರೆಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಮೈಸೂರು ನಗರದ ಹೃದಯ ಭಾಗದಲ್ಲಿ   ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡ ಇದೆ. ತಜ್ಞರು  ಮಾರುಕಟ್ಟೆ ಸಂರಕ್ಷಣೆ ಮಾಡಿದರೆ ಮುಂದಿನ 100 ವರ್ಷ ಬಾಳುತ್ತದೆ ಎಂದು ಹೇಳಿದ್ದಾರೆ, ಆದ್ದರಿಂದ ಇವುಗಳ ಸಂರಕ್ಷಣೆ ‌ಆಗಬೇಕು ಎಂದು ಹೇಳಿದರು.

ನಾವೆಲ್ಲ ಪಾರಂಪರಿಕ ಕಟ್ಟಡಗಳನ್ನು  ನೋಡುತ್ತಾ ಬೆಳೆದಿದ್ದೇವೆ. ಮುಂಬರುವ ಪೀಳಿಗೆ ಸಹ ಪಾರಂಪರಿಕ ಕಟ್ಟಡ ನೋಡಬೇಕು ಎಂದು ತಿಳಿಸಿದರು.

ಮಾರುಕಟ್ಟೆಗೆ ಹೋಗುವುದೇ ನಾಗರೀಕರ ಒಂದು ಪದ್ಧತಿ, ಸಮುದಾಯ ಉಳಿಯಲು ಮಾರುಕಟ್ಟೆ ಅವಶ್ಯಕತೆ ಇದೆ.ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ  ಎಂದು ತಿಳಿಸಿದರು.

ಬಾಡಿಗೆದಾರರ ಸಂಘದ ಅಧ್ಯಕ್ಷ ಪೈಲ್ವಾನ್ ಎಸ್.ಮಹದೇವ್ ರವರ ನೇತೃತ್ವದಲ್ಲಿ ಸುಮಾರು 500 ಜನರು ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡ ಉಳಿಸಿ ಪಾದಯಾತ್ರೆ ನಡೆಸಿದರು.

ಪಾರಂಪರಿಕ ತಜ್ಞರಿಂದ ಮತ್ತೊಮ್ಮೆ ಎರಡೂ ಕಟ್ಟಡಗಳನ್ನು ಪರಿಶೀಲಿಸಿ ಬಳಿಕ ನಿರ್ಧಾರಕ್ಕೆ ಬರಬೇಕು ಎಂದು ಇದೇ ವೇಳೆ ಎಸ್.ಮಹದೇವ್ ಒತ್ತಾಯಿಸಿದರು.

ಮೈಸೂರು ವಾಣಿಜ್ಯ ಉದ್ಯಮ ಅಧ್ಯಕ್ಷ ಲಿಂಗರಾಜ, ಕಾರ್ಯದರ್ಶಿ ಶಿವಾಜಿ  ಹಾಜರಿದ್ದರು.