ಮುಸ್ಲಿಮರು ಮನಸ್ಥಿತಿ ಬದಲಿಸಿಕೊಳ್ಳದಿದ್ದರೆ ಬುಲ್ಡೋಜರ್ ಬರಲಿದೆ -ಪ್ರತಾಪ್ ಸಿಂಹ

ಮೈಸೂರು: ಮುಸ್ಲಿಮರು ಮನಸ್ಥಿತಿ ಬದಲಿಸಿಕೊಳ್ಳಬೇಕು. ಕಲ್ಲು ತೂರುವ ಸಂಸ್ಕೃತಿ ಬಿಡಬೇಕು. ಇಲ್ಲದಿದ್ದರೆ  ಬುಲ್ಡೋಜರ್ ಬರಲಿದೆ ಎಂದು ‌ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮರು ಮನಸ್ಥಿತಿ ಬದಲಿಸಿಕೊಳ್ಳದಿದ್ದರೆ ಉತ್ತರ ಪ್ರದೇಶದಲ್ಲಿ ಇರುವಂತೆ ಆಗುತ್ತದೆ ಎಂದು ಹೇಳಿದರು.

ಮುಸ್ಲಿಮರ ಮೆರವಣಿಗೆ ಮೇಲೆ ಹಿಂದೂಗಳು ಎಂದು ಕೂಡ ಕಲ್ಲು ತೂರಾಟ ನಡೆಸಿಲ್ಲ. ಆದರೆ ಹಿಂದೂಗಳ ಮೆರವಣಿಗೆ ಮೇಲೆ ಮುಸ್ಲಿಮರಿಂದ ಕಲ್ಲು ತೂರಾಟವಾಗಿದೆ. ಯಾವುದೇ ಧರ್ಮೀಯರು ಕಲ್ಲು ತೂರುವುದಿದಲ್ಲ. ಆದರೆ ಮುಸ್ಲಿಮರು ಮಾತ್ರ ಅನ್ಯ ಧರ್ಮೀಯರ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ಸಂಸದ ಆರೋಪಿಸಿದರು.

ಮುಸ್ಲಿಮರಲ್ಲೂ ನಮ್ಮದೇ ರಕ್ತ ಹರಿಯುತ್ತಿದೆ. ಅವರು ಮನಸ್ಥಿತಿ ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಅಂಗಡಿ ಮುಗ್ಗಟ್ಟನ್ನು ಬಂದ್ ಮಾಡಿದ್ದರಿಂದ ಸಮಸ್ಯೆ ಆರಂಭವಾಯಿತು ಇದನ್ನು ಅವರು ಅರಿತುಕೊಳ್ಳಬೇಕು ಎಂದರು.

ಈ ಬಾರಿ ದಸರಾ ವೇಳೆಗೆ ಬೆಂಗಳೂರು-ಮೈಸೂರು ಹೈವೇಯನ್ನ ಸಂಪೂರ್ಣವಾಗಿ  ಮುಕ್ತ ಮಾಡುತ್ತೇವೆ ಎಂದು ಇದೇ ವೇಳೆ ಪ್ರತಾಪ್ ಸಿಂಹ ತಿಳಿಸಿದರು.

ಜೂನ್ ಅಂತ್ಯದ ವೇಳೆಗೆ ಬೆಂಗಳೂರು-ನಿಡಘಟ್ಟ ಹೈವೇ ಸಂಚಾರ ಮುಕ್ತವಾಗಲಿದೆ‌ ಎಂದರು.

ಮೈಸೂರಿನಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಿಕೊಡಲಾಗಿದೆ,ಶಾಸಕರಾದ

ದೇವೇಗೌಡ, ಎಸ್. ಎ ರಾಮದಾಸ್ ಸೇರಿದಂತೆ ಎಲ್ಲರಿಗೂ ಮನವರಿಕೆ ಮಾಡಿಕೊಡಲಾಗಿದೆ ಎಲ್ಲರೂ ಈ ಕಾಮಗಾರಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಮೈಸೂರು ಮಹಾರಾಜರು ಮುಂದಿನ ನೂರು ವರ್ಷಕ್ಕೆ ಪ್ಲಾನ್ ಮಾಡಿ  ರಸ್ತೆ ಮಾಡಿದ್ದರು. ಮುಂದಿನ ಹತ್ತಾರು ಪೀಳಿಗೆ ‌ಬಗ್ಗೆ ಯೋಚನೆ ಮಾಡಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ನಾವು ಮುಂದಿನ 100- 200 ವರ್ಷ ಯೋಚನೆ ಮಾಡಿದ್ದೇವೆ.

ಚುನಾವಣೆಯನ್ನ ಮುಂದೂಡಿ ಗ್ರೇಟರ್ ಮೈಸೂರು ಮಾಡಬೇಕು ಎಂಬ ಚಿಂತನೆ ಮಾಡಿದ್ದೇವೆ. 4 ಪಟ್ಟಣ ಪಂಚಾಯ್ತಿ, ಒಂದು ನಗರಸಭೆ ಒಳಗೊಂಡಂತೆ ಗ್ರೇಟರ್ ಮೈಸೂರು ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಸಂಸದರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಶ್ರೀವಸ್ತ, ಸ್ಥಳೀಯ ಮುಖಂಡರಾದ ವಾಣೀಶ್, ಗಿರಿಧರ್, ಸೋಮಸುಂದರ್  ಉಪಸ್ಥಿತರಿದ್ದರು.