ಕಾಂಗ್ರೆಸ್ ನವರ ಜೊತೆ ಕೆಲ ಹಿತಶತ್ರುಗಳು ಸೇರಿ ಷಡ್ಯಂತ್ರ ಮಾಡಿದ್ದಾರೆ – ಡಾ.ಕೆ. ಸುಧಾಕರ್

ಬೆಂಗಳೂರು: ಕಾಂಗ್ರೆಸ್ ನಾಯಕರ ಜೊತೆ ಕೆಲ ಹಿತಶತ್ರುಗಳು ಕೈ ಜೋಡಿಸಿ ಷಡ್ಯಂತ್ರ ನಡೆಸಿರುವ ಬಗ್ಗೆ ಮಾಹಿತಿ ಇದೆ. ಅವರ ಮುಖವಾಡಗಳನ್ನು ಕಳಚುವ ದಿನ ದೂರವಿಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ.

ಒಳ್ಳೆ ಕೆಲಸ ಮಾಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲು ಕಾಂಗ್ರೆಸ್‍ಗೆ ಯಾವ ನೈತಿಕತೆ ಇದೆ ಎಂದು ಸುಧಾಕರ್ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಹಗರಣಗಳ ಭೂತವನ್ನು ಬೆನ್ನಿಗೆ ಕಟ್ಟಿಕೊಂಡಿರುವ ಇವರ ಬಯಲಾಟವನ್ನು ರಾಜ್ಯದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇನ್ನಾದರೂ ರಚನಾತ್ಮಕ ಚಟುವಟಿಕೆಗಳ ಮೂಲಕ ಜನರ ಮುಂದೆ ಹೋಗಲಿ ಎಂದು ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಸುಳ್ಳುಗಳ ಕಂತೆಯನ್ನೇ ಸತ್ಯ ಎಂದು ಬಿಂಬಿಸುವ ರಾಜಕೀಯ ದೊಂಬರಾಟ ರಾಜ್ಯದಲ್ಲಿ ನಡೆಯುತ್ತಿದೆ. ಆಧಾರ ರಹಿತ, ದಾಖಲೆಗಳೇ ಇಲ್ಲದ ಆರೋಪಗಳ ಮೂಲಕ ಸರ್ಕಾರದ ವರ್ಚಸ್ಸಿಗೆ ಮಸಿ ಬಳಿಯುವ ಮತ್ತು ಸಚಿವರ ತೇಜೋವಧೆ ಮಾಡುವ ಹುನ್ನಾರ ನಡೆದಿದೆ.ಇದಕ್ಕಾಗಿ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು.

ಇವರ ಆರೋಪಗಳಲ್ಲಿ ಸತ್ಯಾಂಶ ಇದ್ದಲ್ಲಿ, ದಾಖಲೆಗಳು ಇದ್ದಲ್ಲಿ ಎಸಿಬಿ, ಲೋಕಾಯುಕ್ತ ಇಲ್ಲವೇ ಕೋರ್ಟ್‍ಗಳಿಗೆ ದೂರು ನೀಡಬಹುದು ಎಂದು ಸಚಿವರು ಹೇಳಿದರು.

ಆದರೆ ಇವರಿಗೆ ಸತ್ಯ ಬೇಕಾಗಿಲ್ಲ. ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುವುದು ಇವರ ಏಕೈಕ ಉದ್ದೇಶ ಎಂದು ಟೀಕಿಸಿದ್ದಾರೆ

ಪ್ರತಿಭಟನೆ ಹೆಸರಿನಲ್ಲಿ ಪ್ರತಿದಿನ ಬೀದಿ ನಾಟಕ ಆಡುತ್ತಿದ್ದಾರೆ. ಹಿಂದೆ ಇವರು ಅಧಿಕಾರದಲ್ಲಿದ್ದಾಗ ಹಗರಣಗಳ ಕೆಸರಿನಲ್ಲೇ ಮುಳುಗಿ ಹೋಗಿದ್ದರು.

ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಈಗ ಬೇರೆಯವರ ತಟ್ಟೆಯಲ್ಲಿ ನೊಣ ಹುಡುಕುವ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ವಾಡಿದ್ದಾರೆ.

ಬಿಜೆಪಿ ಸರರ್ಕಾರ ಬಂದು ಮೂರು ವರ್ಷ ಕಾಂಗ್ರೆಸ್ ನಾಯಕರು ನಿದ್ರಾವಸ್ಥೆಯಲ್ಲಿದ್ದರು. ಚುನಾವಣೆಗೆ ಇನ್ನೇನು ಒಂದು ವರ್ಷ ಇದೆ ಅನ್ನುವಾಗ ಹೇಗಾದರೂ ಅಧಿಕಾರಕ್ಕೆ ಬರಬೇಕು ಎಂಬ ಹಪಾಹಪಿಯಲ್ಲಿ ಇಂಥ ವಾಮಮಾರ್ಗ ಹಿಡಿದಿದ್ದಾರೆ ಎಂದು ಸುಧಾಕರ್ ಕಿಡಿಕಾರಿದ್ದಾರೆ.