ಸಿದ್ದು ಹೆಸರು ಉಲ್ಲೇಖಿಸದೆ ಟ್ವೀಟ್ ನಲ್ಲಿ ಎಚ್ ಡಿ ಕೆ ವಾಗ್ದಾಳಿ

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೈತಿಕತೆ ಬಗ್ಗೆ ಪ್ರಶ್ನಿಸುವ ಸಿದ್ಧಹಸ್ತ ನೀವೇ ಪರ್ಸೆಂಟೇಜ್ ವ್ಯವಹಾರದ ಪಿತಾಮಹ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ  ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ

ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸದೆ ಟ್ವೀಟ್ ಮಾಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಆಪ್ತ ಶಾಸಕರಿಗೆ ಮೀಟಿಂಗ್‍ ಗೆ ಇಂತಿಷ್ಟು ಎಂದು ಕೊಟ್ಟು ಕಮಿಷನ್ ಹೊಡೆದ ಕಥೆ, ಕಾದಂಬರಿ ಬರೆಯುವಷ್ಟಿದೆ. ಅರ್ಕಾವತಿ ರೀಡೂ ರಿಂಗ್ ಮಾಸ್ಟರ್‍ ಆಗಿ ಅಡ್ಡಡ್ಡ ನುಂಗಿ ನ್ಯಾ.ಕೆಂಪಣ್ಣ ಆಯೋಗದ ಕೃಪೆಯಿಂದ ಪಾರಾದ ನಿಮ್ಮ ಯೋಗ್ಯತೆ ನನಗೆ ಗೊತ್ತಿಲ್ಲವೇ ಎಂದಿದ್ದಾರೆ.

ನಿಮ್ಮ ನಿಜವಾದ ಬಣ್ಣ ಇನ್ನೇನು ಕಳಚಿ ಬೀಳಲಿದೆ. ನಿಮ್ಮ ಸುಳ್ಳು ನಿಮ್ಮನ್ನೇ ಸುಡುವ ಕಾಲ ಸನಿಹದಲ್ಲಿದೆ ಎಂದು ಹೇಳಿದ್ದಾರೆ.

ಹಾಸನದಲ್ಲಿ ವೃಥಾ ಹರಿಬಿಟ್ಟ ಸತ್ಯಭಕ್ಷ ನಾಯಕನ ಆಚಾರಹೀನ ಅರಿವುಗೆಟ್ಟ ನಾಲಗೆ ಮತ್ತೆ ಹುಚ್ಚು ಕುಣಿತ ಮಾಡುತ್ತಿದೆ. ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರವೇ ಇಲ್ಲ. ಮತ್ತೆ ಮತ್ತೆ ಕೆಣಕುವ ದುಸ್ಸಾಹಸ ಬೇರೆ ಎಂದು ಟೀಕಿಸಿದ್ದಾರೆ.

ಆಪರೇಷನ್ ಕಮಲ ಬಿಜೆಪಿ ಪಾಪದ ಕೂಸು. ಆ ಕೂಸಿಗೆ ಹಾಲೆರೆದವರು ಯಾರಯ್ಯ ಸುಳ್ಳುರಾಮಯ್ಯ ಇಂಥ ಅನೈತಿಕ ಕೂಸಿಗೆ ಹಾಲೆರೆದು ಬೆಳೆಸಿ, ದೊಡ್ಡದು ಮಾಡಿದ ನೀವು, ಜೆಡಿಎಸ್  ಬಿಜೆಪಿಯ ಬೀ ಟಿಂ ಎಂದು ಹಾದಿಬೀದಿಯಲ್ಲಿ ಜಾಗಟೆ ಹೊಡೆಯುತ್ತಿದ್ದೀರಿ ಇದ್ಯಾವ ಸೀಮೆ ರಾಜಕೀಯ ಎಂದು ಪ್ರಶ್ನಿಸಿದ್ದಾರೆ.

2018ರಲ್ಲಿ ಒಳ್ಳೇ ಆಡಳಿತ ನಡೆಸಲೆಂದು ಕುಮಾರಸ್ವಾಮಿಗೆ ಅಕಾರ ಕೊಟ್ಟೆವು ಎಂದಿದ್ದೀರಿ. ಆ ಮುನ್ನ 5 ವರ್ಷ ಕೆಟ್ಟ ಆಡಳಿತ ಕೊಟ್ಟೆ ಎಂದು ನೀವೇ ಒಪ್ಪಿಕೊಂಡ ಹಾಗಾಯಿತಲ್ಲ ಎಂದಿದ್ದಾರೆ.