ವಿಧಾನಸಭಾ ಚುನಾವಣೆಯಲ್ಲಿ 50 ಸನ್ಯಾಸಿಗಳು ಸ್ಪರ್ಧೆ -ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಉತ್ತರಕನ್ನಡ: ಶಾಸಕಾಂಗದ ಸಮಗ್ರ ಬದಲಾವಣೆಗಾಗಿ ರಾಜ್ಯದಲ್ಲಿ 50 ಸನ್ಯಾಸಿಗಳು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು

ಉಜಿರೆ ಶ್ರೀರಾಮಕ್ಷೇತ್ರದ ಪೀಠಾಧಿಪತಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.

ಭಟ್ಕಳದಲ್ಲಿ ನಡೆಯುತ್ತಿರುವ ಶ್ರೀಕ್ಷೇತ್ರ ಸಾರದಹೊಳೆ ಹಳೆಕೋಟೆ ಹನುಮಂತ ದೇವರ 6ನೇ ದಿನದ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ಪ್ರೇರಣೆ ಪಡೆದಿದ್ದೇವೆ ಎಂದು ಹೇಳಿದರು.

ಜನಪ್ರತಿನಿಧಿಗಳು ಪ್ರಜೆಗಳನ್ನು ತಮ್ಮ ಮಕ್ಕಳಂತೆ ಕಾಣುವ ಕೆಲಸವಾಗಬೇಕು. ಆದರೆ  ಈ ರಾಜ್ಯಾಂಗದ ವ್ಯವಸ್ಥೆ ದಿಕ್ಕು ತಪ್ಪುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಮಾರ್ಕೆಟ್ ನಲ್ಲಿ ಗಲಾಟೆ ಆದಂತೆ ಆಗುತ್ತದೆ. ಎಷ್ಟೋ ಸಲ ನಮ್ಮ ವಿಧಾನಸಭಾಧ್ಯಕ್ಷರಾದವರ ಪರಿಸ್ಥಿತಿ ನೋಡಿದಾಗ ಬೇಸರವಾಗುತ್ತದೆ ಎಂದರು.

ಇದನ್ನೆಲ್ಲ ನೋಡಿದರೆ ಸಂವಿಧಾನ ಇದೆಯೋ, ಇಲ್ಲವೋ ಎಂದು ಗೊತ್ತಾಗುತ್ತಿಲ್ಲ, ರಾಜ್ಯಾಂಗದ ಪರಿಕಲ್ಪನೆ ಇದೆಯೇ, ಇಲ್ಲವೋ ಗೊತ್ತಾಗುವುದಿಲ್ಲ. ಇದಕ್ಕೆಲ್ಲ ಸಮಗ್ರ ಬದಲಾವಣೆ ಆಗಬೇಕು. ಅದಕ್ಕಾಗಿ ನಾವು ಸನ್ಯಾಸಿಗಳು ತಯಾರಾಗಿದ್ದೇವೆ, ಉತ್ತರಾಖಂಡದಲ್ಲಿ ಈ ಬಗ್ಗೆ ಅನೇಕ ಸಭೆ ನಡೆಸಿದ್ದೇವೆ ಎಂದು ತಿಳಿಸಿದರು.

ರಾಜ್ಯಾಂಗ, ಸಂವಿಧಾನ ಏನೆಂದು ನಮ್ಮ ನಾಯಕರುಗಳಿಗೆ ಗೊತ್ತಿಲ್ಲ. ರಾಜಕೀಯಕ್ಕೆ ಬರುವುದೇ ಸುಖಕ್ಕಾಗಿ, ಪ್ರಚಾರಕ್ಕಾಗಿ, ದುಡ್ಡಿಗಾಗಿ ಎಂಬುದು ಒಬ್ಬ ಗ್ರಾಮಪಂಚಾಯತಿ ಸದಸ್ಯನಿಂದ ಹಿಡಿದು ಎಲ್ಲರ ಪರಿಕಲ್ಪನೆಯಾಗಿದೆ ಎಂದು ಶ್ರೀಗಳು ಬೇಸರ ಪಟ್ಟರು.

ಕಾನೂನು ಗೊತ್ತಿಲ್ಲದವರು ರಾಜ್ಯಾಂಗದೊಳಗೆ ಬಂದು ಕಾನೂನು ಮಾಡಲು ಹೇಗೆ ಸಾಧ್ಯ ಹೀಗಾಗಿ ತಿದ್ದುಪಡಿ ಮಾಡಬೇಕು. ಯಾರೇ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಆತ ಕನಿಷ್ಠ ಪದವಿಯನ್ನಾದರೂ ಪಡದಿರಬೇಕು.

ಮಂತ್ರಿಯಾಗಲು ಕಾನೂನು ವಿದ್ವಾಂಸರೇ ಆಗಿರಬೇಕು. 4ನೇ ಕ್ಲಾಸು, 10ನೇ ಕ್ಲಾಸ್ ಓದಿದವರನ್ನು ಮಂತ್ರಿ ಮಾಡಿದರೆ ರಾಜ್ಯದ ಕಾನೂನುಗಳನ್ನು ಹೇಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಸಂವಿಧಾನ ಪಾಲನೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ನೋಡಲು ಪ್ರತಿ ತಾಲೂಕಿನಲ್ಲಿ ನ್ಯಾಯಾಧೀಶರ ವೀಕ್ಷಣಾ ಮಂಡಳಿ ರಚನೆಯಾಗಬೇಕು.

ಚುನಾಯಿತರಾದ ಶಾಸಕರಿಗೆ ನಿವೃತ್ತ ನ್ಯಾಯಾಧೀಶರಿಂದ ತಿಂಗಳಿಗೆ ಐದು ದಿನವಾದರೂ ತರಬೇತಿ ನೀಡಬೇಕು. ಸುಮ್ಮನೆ ಸಂವಿಧಾನ, ಸಂವಿಧಾನ ಎಂದು ಸಂವಿಧಾನದ ಬಗ್ಗೆ ಮಾತನಾಡುತ್ತೀರಿ. ಸಂವಿಧಾನದ ತಲೆಯೂ ಗೊತ್ತಿಲ್ಲ, ಬುಡವೂ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ನನಗೆ ರಾಜಕೀಯದ ಆಸೆಯಿಲ್ಲ. ಆದರೆ ನಾನೇ ಮೊದಲು ಭಟ್ಕಳದಲ್ಲಿ ಈ ಪ್ರಯೋಗ ಮಾಡಿಸುತ್ತೇನೆ. ಸುನೀಲ್ ನಾಯ್ಕ್, ಮಂಕಾಳ ವೈದ್ಯ, ಜೆ.ಡಿ.ನಾಯ್ಕ್, ಆರ್.ಎನ್.ನಾಯ್ಕ್ ಯಾರೇ ಆಕಾಂಕ್ಷಿ ಇದ್ದರೂ ಈ ವೇಳೆ ಹಿಂದೆ ಸರಿಯುತ್ತಾರೆ ಎಂದು ಭಾವಿಸಿದ್ದೇನೆ ಎಂದರು

ವಿಧಾನಸಭೆಯಲ್ಲಿ ಇಡೀ ದಿನ ಜಗಳ ಮಾಡುತ್ತಾರೆ. ಹೊರಗೆ ಬರುವಾಗ ಹೆಗಲ ಮೇಲೆ ಕೈ ಹಾಕಿಕೊಂಡು ಚಹಾ-ಊಟ ಸವಿಯುತ್ತಾರೆ. ಹೊರಗಡೆ ಈ ಹುಡುಗರೆಲ್ಲ ಕುಸ್ತಿ ಮಾಡುತ್ತಾರೆ. ಇದನ್ನ ನೋಡಿ ಸಂತರಿಗೆ ಕಣ್ಣೀರು ಬರುತ್ತಿದೆ. ಸ್ವಾಮಿಗಳು ವೋಟಿಗೆ ನಿಲ್ಲುತ್ತಾರೆಂದು ಯಾರೂ ಹೆದರಬೇಕಿಲ್ಲ.

ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಎಲ್ಲರನ್ನೂ ಸರಿಸಮಾನವಾಗಿ ಕಾಣಲು ನಾವು ರಾಜಕೀಯಕ್ಕೆ ಸ್ಪರ್ಧಿಸುತ್ತಿದ್ದೇವೆ. ಎಲ್ಲರೂ ಸಹೋದರತ್ವ ಪಾಲಿಸಬೇಕು ಎಂದು ಹೇಳಿದರು.