ಬೆಂಗಳೂರು: ಮಂಡ್ಯದಲ್ಲಿ ತಮ್ಮ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ್ದಾರೆಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಟ್ವಿಟರ್ ನಲ್ಲಿ ತಿರುಗೇಟು ಕೊಟ್ಟಿರುವ ಅವರು ನಾಲ್ಕು ಪ್ರಶ್ನೆಗಳನ್ನು ಕೇಳಿದ್ದಾರೆ.
ಆಪರೇಷನ್ ಕಮಲವೆಂಬ ಅನೈತಿಕ ಕೂಸಿನ ಬೇನಾಮಿ ಅಪ್ಪ, ಆ ಪಾಪಕ್ಕೆ ಪ್ರತಿಯಾಗಿ ಪಡೆದ ಫಲದ ಬಗ್ಗೆ ಪಲಾಯನವೇಕೆ ಸುಳ್ಳುರಾಮಯ್ಯ , ಕಳ್ಳಮಾಲು ಹ್ಯೂಬ್ಲೆಟ್ ವಾಚಿನ ಬಗ್ಗೆ ವಾಕರಿಕೆ ಬರುವಷ್ಟು ಹೇಸಿಗೆ ಕಥೆಗಳೇ ಇವೆ. ಇವೆರಡೂ ಪ್ರಶ್ನೆಗಳಿಗೂ ಉತ್ತರಿಸುತ್ತಿಲ್ಲ ಯಾಕಯ್ಯಾ ಎಂದಿದ್ದಾರೆ.
ಈಶ್ವರಪ್ಪ ಬಗ್ಗೆ ಮಾತನಾಡಿ, ಅಭ್ಯಂತರವಿಲ್ಲ. ಡಿವೈಎಸ್ಪಿ ಗಣಪತಿ ಬಗ್ಗೆಯೂ ಹೇಳಿ, ಬೇಜಾರಿಲ್ಲ. ಆದರೆ ಕಲ್ಲಪ್ಪ ಹಂಡೀಭಾಗ್ ಬಗ್ಗೆ ಮಾತನಾಡಿದರೆ ನಿಮ್ಮ ಜಾಣ ಮೌನವೇಕೆ, ಆ ಪಾಪಕ್ಕೆ ಪ್ರಾಯಶ್ಚಿತ್ತ ಅನುಭವಿಸದೇ ವಿಧಿಯೇ ಇಲ್ಲ. ಪ್ರಾಮಾಣಿಕ ಅಧಿಕಾರಿಯ ದುರಂತ ಅಂತ್ಯ ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ ಬಗ್ಗೆ ಸುಳ್ಳು ಹೇಳಿದ್ದೀರಿ. ನಾಚಿಕೆ ಆಗುವುದಿಲ್ಲವೇ ನಿಮಗೆ, ನಿಮ್ಮ 5 ವರ್ಷಗಳ ದುರಾಡಳಿತದಲ್ಲಿ ಆ ಜಿಲ್ಲೆಯೊಂದರಲ್ಲೇ 200 ರೈತರು ಆತ್ಮಹತ್ಯೆಗೆ ಶರಣಾದರು. ಮೈಷುಗರ್ ಕಾರ್ಖಾನೆ ಮುಚ್ಚಿಸಿ ಕಬ್ಬು ಬೆಳೆಗಾರರ ಮನೆ ಹಾಳು ಮಾಡಿದಿರಿ. ಮರೆತುಬಿಟ್ಟಿರಾ ಸುಳ್ಳುರಾಮಯ್ಯ.
ನಾವು ಜಲಧಾರೆ ಮಾಡುತ್ತಿದ್ದೇವೆ, ನಿಜ. ನೀರಾವರಿ ಯೋಜನೆಗಳ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಈ ರಾಜ್ಯಕ್ಕೆ ಹೆಚ್.ಡಿ.ದೇವೇಗೌಡರು ಕೊಟ್ಟ ಕೊಡುಗೆ ಕಣ್ಮುಂದೆಯೇ ಇದೆ.
1962ರಿಂದ ಅವರು ನಡೆಸಿದ ಹೊರಾಟದ ಬಗ್ಗೆ ತಿಳಿದು ಮಾತನಾಡಿ. ಅರಿವುಗೆಟ್ಟ ಹೇಳಿಕೆ ಕೊಟ್ಟು ಅಪಹಾಸ್ಯಕ್ಕೆ ಗುರಿಯಾಗಬೇಡಿ.
ಸ್ವಯಂ ಘೋಷಿತ ಸಂವಿಧಾನ ತಜ್ಞ, ಸ್ವಯಂ ಘೋಷಿತ ಸತ್ಯ ಹರಿಶ್ಚಂದ್ರ, ಈಗ ಹೇಳಿ ಕಾಂಗ್ರೆಸ್ ಕಚೇರಿಯಲ್ಲೇ ಕಾರ್ಯಕರ್ತರ ಸಾಕ್ಷಿಯಾಗಿ ಕಾಂಗ್ರೆಸ್ ಪಕ್ಷವನ್ನು ದೇಶದಿಂದಲೇ ಕಿತ್ತೊಗೆಯಬೇಕು ಎಂದು ನೀವು ಮಾಡಿದ ಭಾಷಣ ಯಾರಿಗಯ್ಯಾ ಭೂಷಣ. ಮಾತೃಪಕ್ಷವನ್ನೇ ಮುಗಿಸಲು ಹೊರಟಿರುವ ನೀವು ಯಾವ ಟೀಮು ಎಂದು ಎಚ್ ಡಿ ಕೆ ಪ್ರಶ್ನಿಸಿದ್ದಾರೆ.
ಈ 4 ಪ್ರಶ್ನೆಗಳಿಗೆ ಧೈರ್ಯವಿದ್ದರೆ ಉತ್ತರಿಸಿ ಎಂದು ಕುಮಾರಸ್ವಾಮಿ ಸಿದ್ದಗೆ ಕುಟುಕಿದ್ದಾರೆ.
1.ಆಪರೇಷನ್ ಕಮಲಕ್ಕೆ ಸಹಕರಿಸಿದ್ದಕ್ಕೆ ಸಿಕ್ಕ ಪ್ರತಿಫಲವೆಷ್ಟು 2.ಆ ಪಾಪದ ಹಣವನ್ನು ಏನು ಮಾಡಿದಿರಿ, 3.ಹ್ಯೂಬ್ಲೆಟ್ ವಾಚಿನ ಸಿದ್ದರಹಸ್ಯವೇನು, 4.ಅರ್ಕಾವತಿ ರೀಡೂ ಬಗ್ಗೆ ಮೌನವೇಕೆ ಎಂದು ಕೇಳಿದ್ದಾರೆ.

