ಅವಧಿಗೂ ಮುನ್ನ ವಿಧಾನಸಭಾ ಚುನಾವಣೆ ನಡೆಯಲ್ಲ -ಬೊಮ್ಮಾಯಿ

ಶಿವಮೊಗ್ಗ: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅವಧಿಗೂ ಮುನ್ನ ವಿಧಾನಸಭಾ ಚುನಾವಣೆ ಎದುರಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಾರೊ ಕೆಲವರು  ಅವಧಿಗೂ ಮುನ್ನ ಚುನಾವಣೆ ನಡೆಯಲಿದೆ ಎಂದು ಪುಕಾರು ಹಬ್ಬಿಸುತ್ತಿದ್ದಾರೆ.ಇದೆಲ್ಲ ಸುಳ್ಳು ಎಂದು ಹೇಳಿದರು.

ನಮ್ಮ ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆಯೇ ನಡೆದಿಲ್ಲ. ನಮಗೆ ಅಂತಹ ಆಲೋಚನೆಯೂ ಇಲ್ಲ ಎಂದು ಬೊಮ್ಮಾಯಿ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಬ್ಬಳ್ಳಿ ಗಲಭೆ ಬಗ್ಗೆ  ಆತಂಕಕ್ಕೆ ಒಳಗಾಗುವುದು ಬೇಡ ಕಾನೂನು ಬದ್ಧವಾಗಿಯೇ ಎಲ್ಲಾ ತನಿಖೆ ಆಗುತ್ತದೆ ಎಂದು ಸಿಎಂ ಹೇಳಿದರು.

ಗಲಭೆಗೆ ಕಾರಣವಾಗಿರುವ ಆರೋಪಿಗಳ ವಿರುದ್ಧ ಮುಲಾಜ್ ಇಲ್ಲದೇ ಕ್ರಮ ಕೈಗೊಳ್ಳುತ್ತೇವೆ. ತನಿಖೆ ಮಾಡುವ ಸಂದರ್ಭದಲ್ಲಿ ಬೇರೆ-ಬೇರೆ ರೀತಿ ಹೇಳಿಕೆ ನೀಡಿ ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರುವ ಅವಶ್ಯಕತೆ ಇಲ್ಲ ಎಂದು ಟಾಂಗ್ ನೀಡಿದರು.

ಹುಬ್ಬಳ್ಳಿ ಪ್ರಕರಣದ ತನಿಖೆ ಕಾನೂನು ಬದ್ಧವಾಗಿ ನಡೆಯುತ್ತಿದೆ. ಈ ವಿಷಯದಲ್ಲಿ ಕಾಂಗ್ರೆಸ್‍ನವರು ಏಕೆ ಆತಂಕಗೊಂಡಿದ್ದಾರೋ ನನಗೆ ಗೊತ್ತಿಲ್ಲ. ಸತ್ಯ ಹೊರಗೆ ಬರುತ್ತದೆ.

ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದ ಘಟನೆಯಂತೆಯೇ ಈಗ ಹುಬ್ಬಳ್ಳಿಯಲ್ಲೂ ಆಗಿದೆ ಎಂದು ಸಿಎಂ ಹೇಳಿದರು.

ದಿಂಗಾಲೇಶ್ವರ ಶ್ರೀಗಳ 30% ಕಮೀಷನ್ ಆರೋಪಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಸ್ವಾಮೀಜಿಗಳ ಬಳಿ ಕಮೀಷನ್ ಕೊಟ್ಟಿರುವುದಕ್ಕೆ ಏನಾದರೂ ದಾಖಲೆಗಳಿದ್ದರೆ ಸರ್ಕಾರಕ್ಕೆ ಕೊಡಲಿ ಖಂಡಿತಾ ತನಿಖೆ ಮಾಡಿಸುತ್ತೇನೆ ಎಂದು ‌ ತಿಳಿಸಿದರು.

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯದಲ್ಲೇ ಪ್ರಾಥಮಿಕ ತನಿಖಾ ವರದಿ ಬರಲಿದೆ. ನಂತರ ಯಾವ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕೆಂಬುದನ್ನು ಸರ್ಕಾರ ತೀರ್ಮಾನಿಸುತ್ತದೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.