ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಾಲ್ಕನೇ ಅಲೆ ಬಂದಿಲ್ಲ ಭಯ ಬೇಡ ಆದರೂ ಮಾಸ್ಕ್ ಧರಿಸುವುದು ಹಾಗೂ ಲಸಿಕೆ ಪಡೆಯುವುದನ್ನು ಮುಂದುವರಿಸುವಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜನರಲ್ಲಿ ಮನವಿ ಮಾಡಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ದೆಹಲಿ ಸೇರಿದಂತೆ ಕೆಲ ರಾಜ್ಯಗಳಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗಿದೆ.ಹಾಗಾಗಿ ನಮ್ಮಲ್ಲೂ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದರು.
ಆರೋಗ್ಯ ಇಲಾಖೆಯ ಸಭೆ ನಡೆಸಿ ಕ್ರಮ ವಹಿಸಲಾಗುವುದು. ಜನರ ಸುರಕ್ಷತಾ ದೃಷ್ಟಿಯಿಂದ ಮಾಸ್ಕ್ ಧರಿಸುವುದು ಹಾಗೂ ಕೋವಿಡ್ ಮೂರನೇ ಡೋಸ್ ಪಡೆಯಲು ಸೂಚಿಸಲಾಗಿದೆ.
ಆದರೆ ಇದನ್ನು ಹೆಚ್ಚಿನವರು ಪಾಲಿಸುತ್ತಿಲ್ಲ, ಇನ್ನೂ 29-30 ಲಕ್ಷ ಜನರು ಎರಡನೇ ಡೋಸ್ ಪಡೆಯಬೇಕಿದೆ ಎಂದು ತಿಳಿಸಿದರು
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ಇಡುವುದು ಸೇರಿದಂತೆ ಹಲವು ಕ್ರಮ ವಹಿಸಲಾಗಿದೆ.
ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಸುಧಾಕರ್ ಸಲಹೆ ನೀಡಿದರು.
ಭ್ರಷ್ಟಾಚಾರ ಹುಟ್ಟುಹಾಕಿದ್ದೇ ಕಾಂಗ್ರೆಸ್ : ಕಾಂಗ್ರೆಸ್ ಪಕ್ಷವೇ ಇಡೀ ದೇಶದಲ್ಲಿ ಭ್ರಷ್ಟಾಚಾರ ಹುಟ್ಟುಹಾಕಿದೆ ಎಂದು ಇದೇ ವೇಳೆ ಸುಧಾಕರ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ಸಿಗರು ಇದೇ ಭ್ರಷ್ಟಾಚಾರದ ಆರೋಪವನ್ನು ಮಾಡಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಬೇರೆ ರಾಜ್ಯಗಳಲ್ಲಿ ವಿಫಲರಾದಂತೆಯೇ ಕರ್ನಾಟಕದಲ್ಲೂ ವಿಫಲರಾಗುವುದು ಖಚಿತ ಎಂದರು.
25 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಇದು ಸಂವಿಧಾನ ನೀಡಿರುವ ಅವಕಾಶ, ಅದೇ ಆಧಾರದಲ್ಲಿ ಸ್ವಾಮೀಜಿಗಳು ಕೂಡ ಸ್ಪರ್ಧೆ ಮಾಡಬಹುದು ಅದರಲ್ಲಿ ವಿಶೇಷವೇನಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸುಧಾಕರ್ ಉತ್ತರಿಸಿದರು.

