ಮೈಸೂರು: ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಏಕವಚನದಲ್ಲಿ ಯರ್ರಾಬಿರ್ರೀ ಹರಿಹಾಯ್ದಿದ್ದಾರೆ.
ಸೋಮವಾರ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ಯಾವೋನ್ರೀ ಪ್ರಮೋದ್ ಮುತಾಲಿಕ್,ಆತ ಒಂದು ಪಂಚಾಯತ್ ಮೆಂಬರ್ ಆಗಿದ್ದಾನಾ ಎಲ್ಲಿಯಾದರೂ ಕೆಲಸ ಮಾಡಿ ಅನುಭವ ಇದೆಯಾ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಏನು ಮಾಡ್ತಿದೆ,ಇಂತವರ ಬಗ್ಗೆ ಯಾಕೆ ಕ್ರಮ ತಗೊಳ್ಳೋದಿಲ್ಲ? ಬದುಕು ಕೊಡುವ, ಜನ ಹಿತ ಕಾಪಾಡುವ, ಜೀವ ಕೊಡುವ ಸರ್ಕಾರ ಆಗಬೇಕು. ಜೀವ ತೆಗೆಯೋ ಸರ್ಕಾರ ಆಗಬಾರದು ಎಂದು ಹೇಳಿದರು.
ಮುತಾಲಿಕ್ ಗೆ ಏನ್ ಅನುಭವ ಇದೆ, ಸರ್ಕಾರ ಇಂತವರ ಬಗ್ಗೆ ಕ್ರಮ ಕೈಗೊಳ್ಳೋಕೆ ಆಗಲ್ಲ ಅಂದ್ರೆ ಏನು? ಇದೇನ್ ಮುತಾಲಿಕ್ ದೇಸಾಯಿ ಸರ್ಕಾರಾನಾ, ಆರ್‍ಎಸ್‍ಎಸ್ ಸರ್ಕಾರಾನಾ, ವಿಹೆಚ್‍ಪಿ ಸರ್ಕಾರಾನಾ ಅಥವಾ ಮುತಾಲಿಕ್ ಸರ್ಕಾರ ನಡೆಸುತ್ತಿದ್ದಾನಾ ಎಂದು ಖಾರವಾಗಿ ಪ್ರಶ್ನಿಸಿದರು.
ಜನತಂತ್ರ ವ್ಯವಸ್ಥೆಯಲ್ಲಿ ಸರ್ಕಾರದ ಬಗ್ಗೆ ಏನ್ ಸಂದೇಶ ಹೋಗುತ್ತೆ. ಇಂತವರ ವಿರುದ್ದ ಒಂದು ಕ್ರಮ ಕೈಗೊಳ್ಳೋಕೆ ಆಗಲ್ವ ಎಂದು ಎಂದು ತಮ್ಮದೇ ಸರ್ಕಾರದ ವಿರುದ್ಧ ವಿಶ್ವನಾಥ್ ಟೀಕಿಸಿದರು.
ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಪರೀಕ್ಷೆಯ ಪಾವಿತ್ರ್ಯತೆ ಹಾಳಾಗಿದೆ. ಪರೀಕ್ಷಾ ವ್ಯವಸ್ಥೆ ಲಂಚಮಯವಾಗಿದೆ. ಒಂದು ಪರೀಕ್ಷೆಯನ್ನು ನೀಟಾಗಿ ಮಾಡಕ್ಕಾಗಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.
ಗೀತಾ ಎಂಬ ಲಾಯರನ್ನು ಕೆಪಿಎಸ್‍ಸಿಗೆ ನೇಮಕ ಮಾಡಿದ್ದರು. ಆಕೆ ವಿಜಯೇಂದ್ರ ಫ್ರೆಂಡ್ ಅಂತೆ. ಹಿರಿಯ ಅಧಿಕಾರಿಗಳು ಕೆಪಿಎಸ್ ಸಿಗೆ ನೇಮಕವಾಗ್ತಿಲ್ಲ. ಕೆಪಿಎಸ್‍ಸಿ ಪಾವಿತ್ರ್ಯತೆ ಹಾಳು ಮಾಡ್ತಿದ್ದಾರೆ ಎಂದು ಗುಡುಗಿದರು.
ಅಭ್ಯರ್ಥಿ ಆಯ್ಕೆ ಮಾಡೋರೆ ಭ್ರಷ್ಟರಾದ್ರೆ ಏನು ನಿರೀಕ್ಷೆ ಮಾಡಲು ಸಾಧ್ಯ. ಯುಪಿಎಸ್‍ಸಿಯಲ್ಲಿ ಎಂತೆಂತವರು ಇದ್ದಾರೆ. ಅದರಂತೆ ಕೆಪಿಎಸ್‍ಸಿಯಲ್ಲೂ ಏಕೆ ಇಲ್ಲ. ಜನ ಹೇಳೊದು ಸರಿ, ನಾವು ಮಾಡೋದು ಸರಿ ಅನ್ನುವ ಹಾಗಿದೆ.
ಜನ ಭ್ರಷ್ಟ ಸರ್ಕಾರ ಅಂತ ಹೇಳುತ್ತಿದ್ದಾರೆ, ನಾವು ಹಾಗೆ ಮಾಡುತ್ತಿದ್ದೇವೆ.ಮುಖ್ಯ ಮಂತ್ರಿ ಬೊಮ್ಮಾಯಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಸಿದ್ದು ಬಗ್ಗೆ ಮೃದುವಾದ ವಿಶ್ವನಾಥ್: ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಬಗ್ಗೆ ಮೃದು ಧೋರಣೆ ತಾಳಿದ ಹೆಚ್.ವಿಶ್ವನಾಥ್, ಹುಣಸೂರಿನಿಂದ ಸ್ಪರ್ಧಿಸುವಂತೆ ಆಹ್ವಾನಿಸಿದರು.
ಹುಣಸೂರಿನಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ಗೆಲ್ಲಿಸುತ್ತೇವೆ. ಶೆಟ್ರು ಮಂಜನನ್ನೇ ಗೆಲ್ಲಿಸಿದ್ದೇವೆ. ಅವರನ್ನ ಗೆಲ್ಲಿಸಲ್ವಾ, ರಾಜ್ಯದಲ್ಲಿ ಸಿಎಂ ಆದವರನ್ನ ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಐದು ವರ್ಷ ಯಶಸ್ವಿ ಆಡಳಿತ ಕೊಟ್ಟಿದ್ದಾರೆ. ಅಂತವರು ವಿಧಾನಸಭೆಯಲ್ಲಿರಬೇಕು. ಐದು ವರ್ಷಗಳ ಅನುಭವವನ್ನು ಹಂಚಿಕೊಳ್ಳಲು ಅನುಕೂಲ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು.

