ಬೆಂಗಳೂರು: ಕೇವಲ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಕೆಲಸ ಮಾಡುವ ಬದಲು ಪಕ್ಷ ಮತ್ತು ಸಂಘಟನೆಗೆ ಹೆಸರು ತರುವಂತಹ ಕೆಲಸಗಳನ್ನು ಸಚಿವರು ಮಾಡಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.
ಸಚಿವರಾದವರು ಉಸ್ತುವಾರಿ ವಹಿಸಿಕೊಂಡ ನಂತರ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಸಂಚರಿಸಿ ಪಕ್ಷ , ಸರ್ಕಾರ ಹಾಗೂ ಸಂಘಟನೆಗೆ ಹೆಸರು ತರುವ ಕೆಲಸ ಮಾಡಬೇಕು. ಕೇವಲ ಸ್ವಾರ್ಥ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿರುವ ಕೆಲವು ಸಚಿವರು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಪಕ್ಷ ಸಂಘಟನೆ, ಪ್ರತಿಪಕ್ಷಗಳ ಆರೋಪಕ್ಕೆ ಪ್ರತ್ಯುತ್ತರ ಕೊಡಬೇಕು. ಆದರೆ ಕೆಲವು ಸಚಿವರ ಕಾರ್ಯವೈಖರಿ ಸಮಾಧಾನ ತಂದಿಲ್ಲ ಎಂದು ಬೇಸರಪಟ್ಟರು.
ನಾಮಕಾವಸ್ಥೆ ಸಚಿವರಾಗುವುದರಲ್ಲಿ ಅರ್ಥವಿಲ್ಲ. ಜಿಲ್ಲೆಯಿಂದ ಹಿಡಿದು ತಾಲ್ಲೂಕು, ಹೋಬಳಿ ಮಟ್ಟದವರೆಗೂ ಓಡಾಡಿ ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಬೇಕೆಂದು ಹೇಳಿದರು.
ಕೇವಲ ಜಿಲ್ಲಾ ಮಟ್ಟ ವಿಧಾನಸೌಧದ ಮೂರನೇ ಮಹಡಿಗೆ ಮಾತ್ರ ಸೀಮಿತವಾಗಬಾರದು ಎಂದು ಸಲಹೆ ನೀಡಿದರು.
ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಇದ್ದು, ಹೊಸಬರಿಗೆ ಮುಖ್ಯಮಂತ್ರಿಗಳು ಅವಕಾಶ ಕೊಡಬೇಕಿತ್ತು. ಕೆಲವು ಸಚಿವರ ಬಳಿ ಹೆಚ್ಚುವರಿ ಖಾತೆಗಳಿವೆ. ಇವುಗಳನ್ನೇ ಕೆಲವು ಶಾಸಕರಿಗೆ ನೀಡಿದ್ದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಅಭಿಪ್ರಾಯ ಪಟ್ಟರು.
ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆಯನ್ನೇ ಕಾಂಗ್ರೆಸ್ ಉಳಿಸಿಕೊಂಡಿಲ್ಲ. ಭ್ರಷ್ಟಾಚಾರದ ಪಿತಾಮಹರೇ ಕಾಂಗ್ರೆಸ್ ನಾಯಕರು ಎಂದು ಕಿಡಿಕಾರಿದರು.

