ಚೆನ್ನೈ: ಮಾನವರಲ್ಲಿ ಮನುಷ್ಯತ್ವ ಮರೆಯಾಗುತ್ತಿದೆ ಆದರೆ ಪ್ರಾಣಿ ಪಕ್ಷಿಗಳು ಒಂದಕ್ಕೊಂದು ಜೀವ ಮಿಡಿಯುತ್ತವೆ,ಇದಕ್ಕೆ ಇಲ್ಲೊಂದು ಉದಾಹರಣೆ ಇದೆ.
ಆನೆಗಳ ಹಿಂಡು ಮತ್ತೊಂದು ಜೀವಕ್ಕಾಗಿ ಮಿಡಿದಿರುವ ದೃಶ್ಯ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆ ಪಡೆದಿದೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲದಲ್ಲಿ ಕೃಷ್ಣಸ್ವಾಮಿ ಎಂಬ ರೈತನ ಬಾಳೆತೋಟಕ್ಕೆ ಆನೆಗಳ ಹಿಂಡು ನುಗ್ಗಿ ದಾಳಿ ಮಾಡಿತ್ತು.
ಆನೆಗಳು 300 ಗಿಡಗಳನ್ನು ನಾಶ ಮಾಡಿ ಇಡೀ ತೋಟದಲ್ಲಿ ಒಂದು ಬಾಳೆ ಗಿಡವನ್ನು ಏನೂ ಮಾಡದೆ ಹಾಗೆಯೇ ಬಿಟ್ಟಿವೆ.
ಇಡೀ ತೋಟ ಹಾಳಾಗಿದ್ದರೂ ಒಂದು ಗಿಡ ಮಾತ್ರ ಹಾಗೆಯೇ ಇರುವುದನ್ನು ಕಂಡು ಅಚ್ಚರಿಗೊಂಡ ತೋಟದ ಮಾಲೀಕ ಕೃಷ್ಣಸ್ವಾಮಿ ಸಮೀಪಕ್ಕೆ ಬಂದು ನೋಡಿದಾಗ ಆ ಬಾಳೆಗಿಡದ ಮೇಲೆ ಗೂಡಿನಲ್ಲಿ ಆಗ ತಾನೇ ಕಣ್ಬಿಟ್ಟಿದ್ದ ಮೂರು ಹಕ್ಕಿಯ ಮರಿಗಳಿದ್ದವು.
ತೋಟಕ್ಕೆ ನುಗ್ಗಿ ಇಡೀ ಬಾಳೆ ಗಿಡಗಳನ್ನು ಹಾನಿ ಮಾಡಿದ್ದ ಆನೆಗಳ ಹಿಂಡು ಬಾಳೆಗಿಡದ ಮೇಲೆ ಹಕ್ಕಿಯ ಗೂಡನ್ನು ಕಂಡಿವೆ.
ಗೂಡಿನಲ್ಲಿ ಹಕ್ಕಿಯ ಮರಿಗಳನ್ನು ಕಂಡು ಇನ್ನೊಂದು ಜೀವಕ್ಕೆ ತೊಂದರೆ ಕೊಡಬಾರದು ಎಂದು ಆ ಬಾಳೆಗಿಡವನ್ನು ಹಾಗೆಯೇ ಬಿಟ್ಟು ಹೋಗಿವೆ.
ಮನುಷ್ಯತ್ವವೇ ನಾಶವಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳು ಮಾತ್ರ ಇನ್ನೊಂದು ಜೀವಕ್ಕೆ ಹಾನಿ ಮಾಡಬಾರದು ಎಂಬುದರ ಬಗ್ಗೆ ನಾಗರಿಕ ಸಮಾಜಕ್ಕೆ ಪಾಠ ಹೇಳಿದಂತಿದೆ ಈ ದೃಶ್ಯ.
ಆನೆಗಳ ಹಿಂಡಿನ ಮಾನವೀಯತೆಯ ಈ ವಿಡಿಯೋವನ್ನು ಐಎಫ್‍ಎಸ್ ಅಧಿಕಾರಿ ಸುಶಾಂತ್ ನಂದ ಎಂಬುವವರು ಟ್ವಿಟ್ ಮಾಡಿದ್ದಾರೆ.
ನಂದ ಅವರ ಈ ಟ್ವಿಟ್ ಭಾರೀ ಸದ್ದು ಮಾಡಿದ್ದು, ಪ್ರಾಣಿಗಳಲ್ಲಿರುವ ಕಾಳಜಿ ಹಾಗೂ ಪ್ರೀತಿಗೆ ನೆಟ್ಟಿಗರು ಭಾರಿ ಸಂತಸ ವ್ಯಕ್ತಪಡಿಸಿದ್ದಾರೆ.

