ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನೇ ಬಳಕೆ ಮಾಡಿ -ಸಿಎಂಗಳಿಗೆ ಮೋದಿ ಸಲಹೆ

ನವದೆಹಲಿ: ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನೇ ಬಳಕೆ ಮಾಡಿದರೆ ನ್ಯಾಯ ವ್ಯವಸ್ಥೆಯ ಮೇಲೆ ಜನಸಾಮಾನ್ಯರ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ನ್ಯಾಯಾಲಯಗಳೊಂದಿಗೆ ಹೆಚ್ಚು ಸಂಪರ್ಕದಲ್ಲಿರಲು ಸಹಾಯವಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನವದೆಹಲಿಯಲ್ಲಿ ಶನಿವಾರ ನಡೆದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಜಂಟಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಇದು ನ್ಯಾಯ ವ್ಯವಸ್ಥೆಯಲ್ಲಿ ಸಾಮಾನ್ಯ ನಾಗರಿಕರ ವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಸುಗಮ ಸಂಪರ್ಕಕ್ಕೆ ಸಹಾಯವಾಗಲಿದೆ ಎಂದು ತಿಳಿಸಿದರು.

ನ್ಯಾಯ ವಿತರಣೆಯನ್ನು ಸುಲಭಗೊಳಿಸಲು ಹಳತಾದ ಕಾನೂನುಗಳನ್ನು ರದ್ದುಗೊಳಿಸಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

2015 ರಲ್ಲಿ ಕೇಂದ್ರ ಸರ್ಕಾರ ಅಪ್ರಸ್ತುತವಾದ ಸುಮಾರು 1,800 ಕಾನೂನುಗಳನ್ನು ಗುರುತಿಸಿದೆ. ಅವುಗಳಲ್ಲಿ 1,450 ಕಾನೂನುಗಳನ್ನು ರದ್ದುಗೊಳಿಸಲಾಗಿದೆ. 75 ಕಾನೂನುಗಳನ್ನು ರಾಜ್ಯ ಸರ್ಕಾರಗಳು ರದ್ದುಪಡಿಸಿವೆ ಎಂದು ಹೇಳಿದರು.

ಭಾರತವು ಸ್ವಾತಂತ್ರ್ಯದ 75 ನೇ ವರ್ಷಾಚರಣೆಯನ್ನು ಆಚರಿಸುತ್ತಿರುವಾಗ ಎಲ್ಲರಿಗೂ ಸುಲಭವಾಗಿ, ತ್ವರಿತವಾಗಿ ನ್ಯಾಯ ದೊರೆಯುವ ವ್ಯವಸ್ಥೆಯನ್ನು ರಚಿಸುವತ್ತ ಗಮನಹರಿಸಬೇಕಿದೆ ಎಂದು ಕರೆ ನೀಡಿದರು.

ಭಾರತದಲ್ಲಿ ನ್ಯಾಯಾಂಗ ಸಂವಿಧಾನ ರಕ್ಷಕನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಶಾಸಕಾಂಗ ನಾಗರಿಕರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ಇವೆರಡರ ಪರಿಣಾಮಕಾರಿ ಸಂಗಮದಿಂದ ಕಾಲಮಿತಿಯ ನ್ಯಾಯಾಂಗ ವ್ಯವಸ್ಥೆ ಸಾಧ್ಯವಾಗಲಿದೆ ಎಂದರು.