ಬೆಂಗಳೂರು: ಪಿಎಸ್‍ಐ ನೇಮಕಾತಿಗೆ ಸರ್ಕಾರ ಯಾವ ಆಧಾರದಲ್ಲಿ ಮರುಪರೀಕ್ಷೆ ನಡೆಸುವ ತೀರ್ಮಾನ ಕೈಗೊಂಡಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಅಕ್ರಮ ನಡೆದಿರುವುದು ಸಿಐಡಿ ತನಿಖೆಯಿಂದ ಸಾಬೀತಾಗಿದೆಯೇ, ಆಗಿದ್ದರೆ ಆ ವರದಿ ಬಿಡುಗಡೆ ಮಾಡಿ ಎಂದು ಆಗ್ರಹಿಸಿದ್ದಾರೆ.
ಯಾವ ಆಧಾರದ ಮೇಲೆ ಪರೀಕ್ಷೆ ರದ್ದುಗೊಳಿಸಲಾಗಿದೆ ಎಂದು ಖುದ್ದು ಮುಖ್ಯಮಂತ್ರಿಯವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪಿಎಸ್‍ಐ ನೇಮಕಾತಿ ಹಗರಣದ ಸೂತ್ರಧಾರಿ ದಿವ್ಯಾ ಹಾಗರಗಿ ಬಂಧನವಾದ ತಕ್ಷಣ ಮರುಪರೀಕ್ಷೆಯ ನಿರ್ಧಾರದ ಹಿಂದಿನ ರಹಸ್ಯ ಏನು, ಆಕೆ ನೀಡಿರುವ ಹೇಳಿಕೆಯಲ್ಲಿ ಅಂತಹ ಸ್ಪೋಟಕ ಸಂಗತಿಗಳೇನಿದೆ.
ಮರುಪರೀಕ್ಷೆಯ ನಿರ್ಧಾರ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸುವುದಕ್ಕಾ ಇಲ್ಲ ಹಗರಣವನ್ನು ಮುಚ್ಚಿ ಹಾಕಿ ದೊಡ್ಡ ತಲೆಗಳನ್ನು ಉಳಿಸಲಿಕ್ಕಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಪಿಎಸ್‍ಐ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸುವ ಮೂಲಕ ನಡೆದಿರುವ ಅಕ್ರಮವನ್ನು ಒಪ್ಪಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗೃಹ ಸಚಿವ ಸ್ಥಾನದಲ್ಲಿ ಮುಂದುವರಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಹಗರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಆರೋಪಿ ಅಕಾರಿಗಳಿಗೆ ರಕ್ಷಣೆ ನೀಡುತ್ತಿರುವ, ಸಾಲು ಸಾಲು ವೈಫಲ್ಯಗಳ ಸರದಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಮುಖ್ಯಮಂತ್ರಿಗಳು ತಕ್ಷಣ ಸಂಪುಟದಿಂದ ಕಿತ್ತುಹಾಕಬೇಕು ಎಂದು ಸಿದ್ದು ಒತ್ತಾಯಿಸಿದ್ದಾರೆ.

