ಆಸಿಡ್ ಸಂತ್ರಸ್ತೆಗೆ ಸರ್ಕಾರಿ ಉದ್ಯೋಗ; ಡಾ.ಸುಧಾಕರ್ ಭರವಸೆ

ಬೆಂಗಳೂರು: ದುಷ್ಕರ್ಮಿಯಿಂದ ಆ್ಯಸಿಡ್ ದಾಳಿಗೆ ಒಳಗಾಗಿ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯ ಆರೋಗ್ಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ವಿಚಾರಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಆರೋಗ್ಯ ಸುಧಾರಿಸಿದ ನಂತರ ಈ ಯುವತಿಗೆ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ ಇದರ ಬಗ್ಗೆ ಸಿಎಂ ಜತೆ ಮಾತನಾಡುತ್ತೇನೆ ಎಂದು ಸಚಿವರು ತಿಳಿಸಿದರು.

ವೈಯಕ್ತಿಕವಾಗಿ ನಾನು 5 ಲಕ್ಷ ಪರಿಹಾರ ನೀಡುತ್ತೇನೆ ಎಂದು ಸುಧಾಕರ್ ಘೋಷಣೆ ಮಾಡಿದರು.

ಅವರ ಕುಟುಂಬವು ಆರ್ಥಿಕವಾಗಿ ತುಂಬ ಕಷ್ಟದಲ್ಲಿದೆ ಎಂದು ಗೊತ್ತಾಗಿದೆ, ಹೀಗಾಗಿ ನನ್ನದೊಂದು ಸಣ್ಣ ನೆರವು ನೀಡುತ್ತಿದ್ದೇನೆ,ಜತೆಗೆ ಆಕೆಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು

ಆ್ಯಸಿಡ್ ದಾಳಿಗೊಳಗಾದ ಯುವತಿ ದೇಹ ಶೇ.35ರಷ್ಟು ಸುಟ್ಟು ಹೋಗಿದೆ. ಪರಿಸ್ಥಿತಿ ಸ್ವಲ್ಪ ಕ್ಲಿಷ್ಟಕರವಾಗಿದೆ. ಆದರೂ ವೈದ್ಯರು ಚೇತರಿಸಿಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯನ್ನು ನಾನೇ ಭೇಟಿಯಾಗಿ ಮಾತನಾಡಿದ್ದೇನೆ. ಸ್ವತಃ ವೈದ್ಯನಾಗಿರುವ ನಾನು ಆಕೆಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ಯಾವ ಕಾರಣಕ್ಕಾಗಿ ಇಂತಹ ಕ್ರೌರ್ಯವನ್ನು ಆ ವ್ಯಕ್ತಿ ಮಾಡಿದ್ದಾನೆ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಯುವತಿ ಮೇಲೆ ಅಮಾನುಷವಾಗಿ ಆ್ಯಸಿಡ್ ದಾಳಿ ಮಾಡಿದ್ದಾನೆ. ಬಿಎಂಸಿಯಿಂದ ಚರ್ಮ ತಜ್ಞರ ಜೊತೆ ಸಂಪರ್ಕದಲ್ಲಿದ್ದೇವೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಆ್ಯಸಿಡ್ ದಾಳಿ ನಡೆಸಿರುವ ಆರೋಪಿಯನ್ನು ಶೀಘ್ರ ಬಂಧಿಸುವ ಕೆಲಸವನ್ನು ಪೊಲೀಸರು ಮಾಡುತ್ತಾರೆ ಎಂದು ಸುಧಾಕರ್ ಹೇಳಿದರು.