ಚನ್ನಪಟ್ಟಣ: ಇಡೀ ದೇಶದ ಗಮನ ಸೆಳೆದಿರುವ ಪಿಎಸ್‌ಐ ಪರೀಕ್ಷೆ ಅಕ್ರಮವನ್ನು ಪೊಲೀಸ್ ಇಲಾಖೆಯೇ ಬಯಲಿಗೆಳೆದಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು ಈ ವಿಚಾರವಾಗಿ ನನಗಿರುವ ಮಾಹಿತಿಯೇ ಬೇರೆ. ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಕೊಲೆ ನಂತರ ನಡೆದ ಬೆಳವಣಿಗೆಗಳಿಗೂ ಈ ಪರೀಕ್ಷೆ ಅಕ್ರಮ ಬಯಲಾಗುವುದಕ್ಕೂ ಲಿಂಕ್ ಇದೆ ಎಂದು ಸ್ಪೋಟಕ ಹೇಳಿಕೆ ನೀಡಿದರು.
ಚಂದ್ರು ಎಂಬ ಯುವಕನ ಕೊಲೆ ಪ್ರಕರಣದ ವಿಚಾರವಾಗಿ ನಡೆದ ಬೆಳವಣಿಗೆಗಳೇ ಪರೀಕ್ಷೆ ಅಕ್ರಮವನ್ನು ಬಯಲಿಗೆಳೆದಿವೆ.
ಬಿಜೆಪಿಯ ವಕ್ತಾರರೊಬ್ಬರು ಪೊಲೀಸ್ ಆಯುಕ್ತ ಕಮಲ್ ಪಂಥ್ ವಿರುದ್ಧವೇ ಆರೋಪ ಮಾಡಿದ್ದರು. ಆ ಕೊಲೆಯ ವಿಚಾರವಾಗಿ ಆಯುಕ್ತರು ಸುಳ್ಳು ಹೇಳುತ್ತಿದ್ದಾರೆಂದು ಅವರು ದೂರಿದ್ದರು.
ಪರಸ್ಪರ ದ್ವಿಚಕ್ರ ವಾಹನ ಢಿಕ್ಕಿ ಕಾರಣಕ್ಕೆ ಗಲಾಟೆ ನಡೆದು ಯುವಕನ ಕೊಲೆಯಾಗಿತ್ತು ಎಂದು ಪೊಲೀಸರು ಹೇಳಿದ್ದರು.
ಆದರೆ, ಬಿಜೆಪಿ ನಾಯಕರು ಹಠಕ್ಕೆ ಬಿದ್ದವರಂತೆ ಉರ್ದು ಭಾಷೆ ಮಾತನಾಡಲು ಬರಲಿಲ್ಲ ಎಂಬ ಕಾರಣಕ್ಕೆ ಗಲಾಟೆಯಾಗಿ ಯುವಕನ ಕೊಲೆಯಾಯಿತು ಎಂದು ಕಥೆ ಕಟ್ಟಿದ್ದರು. ಅದು ಅಲ್ಲಿಂದ ಪಿಎಸ್‌ಐ ಪರೀಕ್ಷೆ ಅಕ್ರಮದವರೆಗೂ ಬಂದು ನಿಂತಿದೆ ಎಂದು ಎಚ್ ಡಿ ಕೆ ಹೇಳಿದರು.
ಪೊಲೀಸ್ ಇಲಾಖೆಯ ಪ್ರಾಮಾಣಿಕ ಅಧಿಕಾರಿ ಕಮಲ್ ಪಂಥ್ ಅವರಿಗೆ ಬಿಜೆಪಿ ನಾಯಕರು ಅವಮಾನ ಮಾಡಿದ್ದರು, ಅದಕ್ಕಾಗಿ ಇಲಾಖೆಯಲ್ಲಿರುವ ಅವರ ಅಭಿಮಾನಿಗಳು ಕೆಲವರು ಸರಕಾರಕ್ಕೆ ಬುದ್ಧಿ ಕಲಿಸಲೆಂದೇ ಹಗರಣವನ್ನು ಹೊರತೆಗೆದಿದ್ದಾರೆ.
ಇದು ಸರಕಾರದಿಂದ ಹೊರಬಂದಿಲ್ಲ, ಪೊಲೀಸ್ ಇಲಾಖೆಯಿಂದಲೇ ಹೊರಬಂದಿದೆ. ಈ ಸರಕಾರದ ನಡವಳಿಕೆಯನ್ನು ಪೊಲೀಸ್ ಇಲಾಖೆಯವರೇ ಹೊರಗೆಳೆದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ನಿಷ್ಠಾವಂತ, ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಮೇಲೆ ಆರೋಪ ಮಾಡಿದ್ದ ಬಿಜೆಪಿಯ ನಾಯಕನಿಗೆ ಪರೀಕ್ಷೆ ಅಕ್ರಮದಲ್ಲಿ ಈಗ ಬಂಧನಕ್ಕೊಳಗಾಗಿರುವ ಕಿಂಗ್‌ಪಿನ್ ಲಿಂಕ್ ಇತ್ತು.
ಪೊಲೀಸರು ಅದರ ಜಾಡು ಹಿಡಿದು ಎಲ್ಲವನ್ನೂ ಹೊರಗೆಳೆದು ಜನರ ಮುಂದೆ ಇಟ್ಟಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಬಗ್ಗೆ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಅವರ ಬಳಿ ದಾಖಲೆ ಇದೆಯಾ ಎಂದು ಎಚ್ ಡಿ ಕೆ ಪ್ರಶ್ನಿಸಿದರು.
ಸಚಿವರ ಸಹೋದ್ಯೋಗಿಗಳೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಬರುತ್ತಿದ್ದಂತೆಯೇ ಅದೆಲ್ಲ ಮಾಧ್ಯಮಗಳಲ್ಲಿ ಬರುವಂತೆ ನೋಡಿಕೊಂಡಿದ್ದಾರೆ. ಇದೆಲ್ಲ ಅಮಿತ್ ಶಾ ತಲೆಗೆ ಹೋಗಲಿ ಎಂದೇ ಸಚಿವರ ವಿರುದ್ಧ ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದರು. ಅಶ್ವತ್ಥನಾರಾಯಣ ವಿಕೆಟ್ ಉರುಳಿಸಲು ಬಿಜೆಪಿಯಲ್ಲಿಯೇ ಸಂಚು ನಡೆದಿದೆ. ರಾಜ್ಯದಲ್ಲಿ ಬಿಜೆಪಿಯವರು ತಮ್ಮ ಮನೆಗೆ ತಾವೇ ಬೆಂಕಿ ಹಚ್ಚಿಕೊಳ್ಳುತ್ತಿದ್ದಾರೆ, ನಾವು ಹಚ್ಚಬೇಕಿಲ್ಲ ಎಂದು ಮಾಜಿ ಸಿಎಂ ಹೇಳಿದರು.

