ಬೆಂಗಳೂರು: ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಸುಮಾರು 300 ಕೋಟಿ ರೂ.ನಷ್ಟು ಹಣದ ವಹಿವಾಟು ನಡೆದಿರುವ ಶಂಕೆಯಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪಿಎಸ್‍ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಸಚಿವರು, ಅಧಿಕಾರಿಗಳು ಭಾಗಿಯಾಗಿರುವುದರಿಂದ ಸಿಐಡಿ ತನಿಖೆಯಿಂದ ನ್ಯಾಯ ಸಿಗುವುದಿಲ್ಲ ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲೂ ಅಕ್ರಮ ನಡೆದಿದೆ, ಈ ಎರಡೂ ನೇಮಕಾತಿಗಳ ಅಕ್ರಮವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಹಲವು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಇರುವುದರಿಂದ ಆಯಾ ಇಲಾಖೆಯ ಸಚಿವರೇ ಹೊಣೆಯಾಗಿದ್ದು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಇಲ್ಲವೇ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಸಿದ್ದು ಹೇಳಿದರು.
ಪಿಎಸ್‍ಐ ನೇಮಕಾತಿ ಅಕ್ರಮದ ಆರೋಪಕ್ಕೆ ಗುರಿಯಾಗಿರುವ ದರ್ಶನ್ ಗೌಡ ಮತ್ತು ನಾಗೇಶ್ ಗೌಡ ಎಂಬುವರು ಸಚಿವರೊಬ್ಬರ ಸಂಬಂಧಿಕರಾಗಿದ್ದಾರೆ.
ದರ್ಶನ ಗೌಡ ಮೊದಲ ಪತ್ರಿಕೆಯಲ್ಲಿ 50 ಅಂಕಕ್ಕೆ 19 ಅಂಕ ಪಡೆದಿದ್ದರೆ, 2ನೇ ಪತ್ರಿಕೆಯಲ್ಲಿ 150 ಅಂಕಕ್ಕೆ 140 ಅಂಕ ಪಡೆದಿದ್ದಾರೆ. ಅಲ್ಲದೆ ಅವರನ್ನು ವಿಚಾರಣೆಗೆ ಕರೆದು ಹಾಗೆಯೇ ಬಿಟ್ಟು ಕಳುಹಿಸಿದ್ದಾರೆ. ಇದರ ಹಿಂದೆ ಸಚಿವರ ಕುಮ್ಮಕ್ಕು ಇಲ್ಲದೆ ನಡೆಯುತ್ತದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

