ತುಮಕೂರು:ದಿವ್ಯಾ ಹಾಗರಗಿ ಕಾರು ಅರಗ ಮನೆಯಲ್ಲಿತ್ತು ಎಂದು ಹೇಳಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ ಸಿಲ್ಲಿ ರಾಜಕಾರಣಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟೀಕಿಸಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,ಕಿಮ್ಮನೆ ಮಾತುಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದರು.
ಪರಿಸ್ಥಿತಿಯ ಲಾಭ ಪಡೆಯಲು ರಾಜಕಾರಣ ಮಾಡುತ್ತಿದ್ದಾರೆ, ಅವರ ಆರೋಪಗಳಿಗೆ ದಾಖಲೆ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು.
ಕಿಮ್ಮನೆ ಶಿಕ್ಷಣ ಸಚಿವರಾಗಿದ್ದ ಕಾಲದಲ್ಲಿಯೇ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ನಾಲ್ಕು ಬಾರಿ ಲೀಕ್ ಆಗಿತ್ತು, ಆಗೇನು ಮಾಡಿದ್ದರು ಎಂದು ಖಾರವಾಗಿ ಆರಗ ಪ್ರಶ್ನಿಸಿದರು.
ಶಾಸಕ ಬಸವನಗೌಡ ಪಟೀಲ್ ಯತ್ನಾಳ್ ಅವರ ಸಿಎಂ ಆಗಲು 2500 ಕೋಟಿ ಕೊಡಬೇಕೆಂಬ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ಸಚಿವರು ತಿಳಿಸಿದರು.
ಅವರು ಅದನ್ನು ಗಂಭೀರವಾಗಿ ಅವರು ಹೇಳಿಲ್ಲ, ರಾಜಕೀಯದಲ್ಲಿ ಇಂತಹದ್ದೆಲ್ಲ ಇರುತ್ತದೆ ಎಂದು ಹೇಳಿರಬಹುದು ಎಂದು ಅಭಿಪ್ರಾಯಪಟ್ಟರು.
ಪಿಎಸ್ಐ ಪರೀಕ್ಷೆಯಲ್ಲಿ ಎಲ್ಲೇ ಅಕ್ರಮವಾಗಿದ್ದರೂ ಪರಿಶೀಲನೆ ಮಾಡಲಾಗುವುದು, ಅಕ್ರಮ ನಡೆದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಇದೇ ವೇಳೆ ಅರಗ ಜ್ಞಾನೇಂದ್ರ ತಿಳಿಸಿದರು.
ರಾಜ್ಯದಲ್ಲಿ ಬಹಳ ಕಡೆ ಅಕ್ರಮವಾಗಿದೆ ಹಾಗಾಗಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷೆ ಬರೆದ 54 ಸಾವಿರ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಅರ್ಹರು ಮತ್ತೊಮ್ಮೆ ಆತ್ಮವಿಶ್ವಾಸದಿಂದ ಮರು ಪರೀಕ್ಷೆ ಬರೆಯಬೇಕೆಂದು ಮನವಿ ಮಾಡಿದರು.

