ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ವಿಭಾಗದ ಮಹಾನಿರ್ದೇಶಕ ಡಾ.ಪಿ.ರವೀಂದ್ರನಾಥ್ ಅವರ ರಾಜೀನಾಮೆಯನ್ನು ರಾಜ್ಯ ಸರಕಾರ ಅಂಗೀಕಾರ ಮಾಡಬಾರದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಪ್ರಾಮಾಣಿಕ, ದಕ್ಷ ಅಧಿಕಾರಿ ರವೀಂದ್ರನಾಥ್ ಅವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ತಿಮಿಂಗಿಲಗಳಿಗೆ ಬಲೆ ಹಾಕಿದ್ದರು. ಸರ್ಕಾರ ಮತ್ತು ಸಮಾಜಕ್ಕೆ ವಂಚನೆ ಮಾಡಿದ್ದವರ ಜಾತಕ ಬಿಚ್ಚಿಡಲು ಅವರು ಪ್ರಯತ್ನ ಮಾಡುತ್ತಿದ್ದರು ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕತೆಯ ಪೋಸು ಕೊಟ್ಟು ನಕಲಿ ಜಾತಿ ಪ್ರಮಾಣ ಪತ್ರದ ಮೂಲಕ ಹುದ್ದೆ ಗಿಟ್ಟಿಸಿರುವ ಆರೋಪ ಎದುರಿಸುತ್ತಿರುವ ನಿವೃತ್ತ ಅಧಿಕಾರಿಗೆ ನೋಟೀಸ್ ನೀಡಿದ ಹತ್ತೇ ದಿನದಲ್ಲಿ ಆ ನೋಟೀಸ್ ಕೊಟ್ಟ ಹಿರಿಯ ಅಧಿಕಾರಿ ರವೀಂದ್ರನಾಥ್ ಅವರನ್ನು ಎತ್ತಂಗಡಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಸರ್ಕಾರ ಯಾರ ಬಾಲಂಗೋಚಿ ಎನ್ನುವುದು ಈ ವರ್ಗಾವಣೆಯಿಂದಲೇ ಅರ್ಥವಾಗುತ್ತದೆ.
ಏಕೆಂದರೆ, ಆರೋಪಿತ ನಿವೃತ್ತ ಅಧಿಕಾರಿ ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಇಲಾಖೆ ಸಲಹೆಗಾರರಾಗಿದ್ದರು. 5 ವರ್ಷ ರಾಜ್ಯವನ್ನಾಳಿದ ಮುಖ್ಯಮಂತ್ರಿಗೆ ಆಪ್ತರೂ ಆಗಿದ್ದರು.
ಅವರಿಗೆ ನೋಟೀಸ್ ನೀಡಿದಾಕ್ಷಣ ಡಾ.ರವೀಂದ್ರನಾಥ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಎಚ್ ಡಿ ಕೆ ದೂರಿದ್ದಾರೆ.
ಹಾಗಾದರೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇರುವ ಒಳ ಒಪ್ಪಂದವೇನು, ಇದು ಒಬ್ಬ ದಲಿತ ಅಧಿಕಾರಿಯನ್ನು ಬಲಿ ಹಾಕಲು ಎರಡೂ ರಾಷ್ಟ್ರೀಯ ಪಕ್ಷಗಳು ನಡೆಸಿದ ಷಡ್ಯಂತ್ರ ಎಂದು ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.

