ಮೈಸೂರು: ಮೈಸೂರಿನ ಅವಧೂತ ದತ್ತ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80 ನೇ ವರ್ಧಂತ್ಯುತ್ಸವ ಪ್ರಯುಕ್ತ ಮೇ 13 ರಿಂದ 18ರವರೆಗೆ ವಿಶ್ವಶಾಂತಿ ಪಾದಯಾತ್ರೆ ನಡೆಯಲಿದೆ.
ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದ್ದು,ಸುಮಾರು 200 ಮಂದಿ ಭಾಗವಹಿಸಲಿದ್ದಾರೆ.
ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಬುಧವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಈ ಬಗ್ಗೆ ಮಾಹಿತಿ ನೀಡಿದರು.
ವಿಶ್ವ ಶಾಂತಿಗಾಗಿ ಮೇ13ರಿಂದ 18ರ ವರೆಗೆ ಆರುದಿನಗಳ ಕಾಲ ಸ್ವಾಮೀಜಿಯವರ ಜನ್ಮಸ್ಥಳವಾದ ಮೇಕೇದಾಟುನಿಂದ ಪಾದಯಾತ್ರೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ದೊಡ್ಡ ಆಲಹಳ್ಳಿ , ಸಾತನೂರು , ಅಲಗೂರು , ಮಳವಳ್ಳಿ ಹಾಗೂ ಬನ್ನೂರಿನ ಮಾರ್ಗವಾಗಿ ನಾಮ ಸಂಕೀರ್ತನೆಯೊಂದಿಗೆ ಪಾದಯಾತ್ರೆ ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮವನ್ನು ತಲುಪುತ್ತದೆ ಎಂದು ಶ್ರೀಗಳು ತಿಳಿಸಿದರು.
ನಾವು ಈ ಪಾದಯಾತ್ರೆಯನ್ನು ಐದು ಉದ್ದೇಶ ಇಟ್ಟುಕೊಂಡು ಮಾಡುತ್ತಿದ್ದೇವೆ ಎಂದು ಹೇಳಿದರು.
ತಾಯಿ-ಮಕ್ಕಳು,ಗೋಸಂಪತ್ತು,ರೈತರು,ಮಳೆ-ಬೆಳೆ ಹಾಗೂ ಲೋಕ ಕಲ್ಯಾಣಾರ್ಥವಾಗಿ ಪಾದಯಾತ್ರೆ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80 ನೇ ವರ್ಧಂತ್ಯುತ್ಸವ ಮೇ 22 ರಿಂದ 31ರವರೆಗೆ ನಡೆಯಲಿದೆ. ಹಿರಿಯ ಶ್ರೀಗಳ ವರ್ಧಂತ್ಯುತ್ಸವ ಪ್ರಯುಕ್ತ ಆಶ್ರಮದಲ್ಲಿ ಹತ್ತು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಗಿನಿಂದ ಸಂಜೆವರೆಗೆ ನಡೆಯಲಿದೆ ಭಕ್ತರು ಪಾಲ್ಗೊಳ್ಳಬೇಕೆಂದು ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಮನವಿ ಮಾಡಿದರು.

