ಮೈಸೂರು: ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಒಂಭತ್ತು ವರ್ಷಗಳ ಬಳಿಕ ಬಿಳಿಹುಲಿ ತಾರಾ ಮೂರು ಮರಿಗಳಿಗೆ ಜನ್ಮನೀಡಿದ್ದು ಪ್ರವಾಸಿಗರಿಗೆ ಮುದ ನೀಡುತ್ತಿದೆ.
ತಾಯಿ ಮತ್ತು ಮೂರು ಮರಿಗಳು ಆರೋಗ್ಯವಾಗಿವೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ಮೃಗಾಲಯದ ಎಂಟು ವರ್ಷದ ಹೆಣ್ಣು ಹುಲಿ ತಾರಾ ಹಾಗೂ ನಾಲ್ಕು ವರ್ಷದ ಗಂಡು ಹುಲಿ ರಾಕಿ ಜೋಡಿಗೆ ಮೂರು ಮರಿಗಳು ಜನಿಸಿವೆ.
ತಾರಾ ಏ.26ರಂದು ಮೂರು ಮರಿಗಳಿಗೆ ಜನ್ಮ ನೀಡಿದ್ದು, ಆರೈಕೆ ಮಾಡುತ್ತಿದೆ.
ಗರ್ಭಿಣಿಯಾಗಿದ್ದ ಹುಲಿಯ ಚಲನವಲನ ಸ್ಥಿತಿಗತಿ ತಿಳಿಯಲು ಬೋನಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.
ಏ.26ರಂದು ಮೂರು ಮರಿಗಳಿಗೆ ಜನ್ಮ ನೀಡಿರುವ ತಾರಾ ಮರಿಗಳಿಗೆ ಸಹಜವಾಗಿ ಹಾಲುಣಿಸುವ ಮೂಲಕ ಆರೈಕೆ ಮಾಡುತ್ತಿದೆ.
ತಾಯಿ ಮತ್ತು ಮರಿಗಳ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ 9ವರ್ಷಗಳ ನಂತರ ಮೃಗಾಲಯದಲ್ಲಿ ಹುಲಿಮರಿಗಳ ಜನನವಾಗಿದ್ದು ಸಂತಸ ತಂದಿದೆ ಎಂದಿದ್ದಾರೆ.
ಇದೀಗ ಮೂರು ಮರಿಗಳು ಜನಿಸಿವೆ. ಪಾಲಕರು ಹಾಗೂ ವೈದ್ಯರು ತಾಯಿ ಹುಲಿ ಹಾಗೂ ಮರಿಗಳ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ.
ಈ ಮರಿಗಳ ಜನನದಿಂದ ಮೈಸೂರು ಮೃಗಾಲಯ 9ಗಂಡು ಹುಲಿ, 7ಹೆಣ್ಣು ಹುಲಿ ಹಾಗೂ ಮೂರು ಹುಲಿಮರಿಗಳನ್ನು ಹೊಂದಿದಂತಾಗಿದೆ ಎಂದು ತಿಳಿಸಿದ್ದಾರೆ.

