ನವದೆಹಲಿ: ಪಾಕಿಸ್ತಾನ ಮೂಲದ ಏಜೆಂಟ್‍ನ ಹನಿಟ್ರಾಪ್‍ಗೆ ಸಿಲುಕಿದ ವಾಯು ಸೇನೆಯ ಅಧಿಕಾರಿಯೊಬ್ಬರು ರಕ್ಷಣಾ ಇಲಾಖೆಯ ನೆಲೆಗಳು, ಸಿಬ್ಬಂದಿಗಳ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿ ಬಂಧನಕ್ಕೊಳಗಾಗಿದ್ದಾರೆ.
ಅಧಿಕಾರಿ 32 ವರ್ಷದ ದೇವೆಂದರ್ ನಾರಾಯಣ ಶರ್ಮಾ ಬಂಧನಕ್ಕೊಳಗಾಗಿದ್ದಾರೆ.
ಅವರು ಇಲ್ಲಿನ ಸುಬ್ರೊಟೊ ಪಾರ್ಕ್ ನಲ್ಲಿರುವ ಭಾರತೀಯ ವಾಯುಪಡೆಯ (ಐಎಎಫ್) ದಾಖಲೆಗಳ ಕಚೇರಿಯಲ್ಲಿ ಆಡಳಿತ ಸಹಾಯಕರಾಗಿ (ಜಿಡಿ) ಕೆಲಸ ಮಾಡುತ್ತಿದ್ದರು.
ತನಿಖೆಯ ಸಮಯದಲ್ಲಿ, ಪಾಕಿಸ್ತಾನ ಮೂಲದ ಮಹಿಳೆಯೊಬ್ಬರು ಶರ್ಮಾ ಅವರನ್ನು ಹನಿಟ್ರ್ಯಾಪ್‍ಗೆ ಬೀಳಿಸಿರುವುದು ಖಚಿತವಾಗಿದೆ.
ಮಹಿಳೆಯೊಂದಿಗೆ ಸಿಬ್ಬಂದಿ, ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆಗಳನ್ನು ಸಾರ್ಜೆಂಟ್ ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಅಪರಾಧ ವಿಭಾಗದ ಪೊಲೀಸರು ಮೇ 6 ರಂದು ಸಾರ್ಜೆಂಟ್ ರ ಕಂಪ್ಯೂಟರ್‍ಗಳು ಮತ್ತು ಇತರ ಫೈಲ್‍ಗಳನ್ನು ಪರಿಶೀಲಿಸಿ ಜಪ್ತಿ ಮಾಡಿದ್ದಾರೆ.
ಆರೋಪ ಮೇಲ್ನೋಟಕ್ಕೆ ಸತ್ಯಾಂಶ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಮಾಹಿತಿ ಸೋರಿಕೆ ಮಾಡಿರುವ ಆಧಾರದ ಮೇಲೆ ಅಧಿಕಾರಿಯನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ ಶರ್ಮಾ ಏಜೆಂಟ್‍ನಿಂದ ಹಣವನ್ನೂ ಸಹ ಪಡೆದಿದ್ದಾರೆ.
ಭಾರತೀಯ ವಾಯುಪಡೆಗೆ ಬಂದ ದೂರಿನ ಆಧಾರದ ಮೇಲೆ ಅಧಿಕೃತ ರಹಸ್ಯ ಕಾಯಿದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ತನಿಖೆಯ ಸಮಯದಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್‍ಗಳು ಮತ್ತು ದಾಖಲೆಗಳಂತಹ ದೋಷಾರೋಪಣೆಯ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ, ಈ ವಿಷಯದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಕಳೆದ ವರ್ಷ ಜುಲೈನಲ್ಲಿ, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‍ಐ) ಗೆ ರಹಸ್ಯ ದಾಖಲೆಗಳನ್ನು ಒದಗಿಸಿದ ಆರೋಪದ ಮೇಲೆ ಅಧಿಕೃತ ರಹಸ್ಯ ಕಾಯಿದೆಯಡಿಯಲ್ಲಿ ಸೇನಾಕಾರಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿತ್ತು.
ಪೋಖ್ರಾನ್ ಆರ್ಮಿ ಬೇಸ್ ಕ್ಯಾಂಪ್‍ನಲ್ಲಿ 34 ವರ್ಷದ ತರಕಾರಿ ಪೂರೈಕೆದಾರರೊಬ್ಬರು ಸೇನಾ ಸಿಬ್ಬಂದಿಯಿಂದ ಹಣಕ್ಕಾಗಿ ಸೂಕ್ಷ್ಮ ದಾಖಲೆಗಳನ್ನು ಪಡೆದು ಐಎಸ್‍ಐಗೆ ಒದಗಿಸಿದ ಆರೋಪ ಕೇಳಿ ಬಂದಿತ್ತು. ಆ ಬಳಿಕ ಈ ಬೆಳವಣಿಗೆ ನಡೆದಿದೆ.

