ಬೆಂಗಳೂರು: ತಮ್ಮದೇ ಪಕ್ಷದ ನಾಯಕ ಎಂ.ಬಿ.ಪಾಟೀಲ್ ಮತ್ತು ನನ್ನ ಹೆಸರು ಹೇಳಿಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದರು ಎಂದು ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಮ್ಯಾ ಅವರ ಟ್ವೀಟ್ ಇವರ ಬಣ್ಣವನ್ನು ಬಯಲು ಮಾಡಿತು. ರಾಂಗ್ ನಂಬರ್ ಡಯಲ್ ಮಾಡಿ ಶಿವಕುಮಾರ್ ಪೆಚ್ಚು ಮೋರೆ ಹಾಕಿಕೊಂಡು ಓಡಾಡಬೇಕಾಗಿದೆ ಎಂದು ವ್ಯಂಗ್ಯ ವಾಡಿದರು.
ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಆದರೂ ಅವರು ನನ್ನನ್ನು ನಿರ್ನಾಮ ಮಾಡಲು ಬಂದು ಅವರೇ ನಾಶವಾಗುತ್ತಿದ್ದಾರೆ ಎಂದು ಟೀಕಿಸಿದರು.
ಈ ಟ್ವೀಟ್ ಕಿತ್ತಾಟ ಕಾಂಗ್ರೆಸ್ಸಿನ ಆಂತರಿಕ ವಿಚಾರ. ಆದರೆ, ನನ್ನ ಹೆಸರನ್ನು ಎಳೆದು ತಂದಿದ್ದರಿಂದ ನಾನು ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂದರು.
ಶಿವಕುಮಾರ್ ಅವರ ಮಾತುಗಳನ್ನು ಅವರ ಪಕ್ಷದ ನಾಯಕರು ಖಂಡಿಸಿರುವುದು ಸ್ವಾಗತಾರ್ಹ. ವೈಯಕ್ತಿಕ ಸಂಬಂಧ ಮತ್ತು ರಾಜಕಾರಣ ಎರಡನ್ನೂ ಬೆರೆಸುವುದು ನೀಚ ಮನಸ್ಥಿತಿ ಎಂದು ಅಶ್ವಥ್ ನಾರಾಯಣ ಖಾರವಾಗಿ ಪ್ರತಿಕ್ರಿಯಿಸಿದರು.
ಶಿವಕುಮಾರ್ ಬಗ್ಗೆ ನನಗೆ ಯಾವುದೇ ಅನುಕಂಪವಿಲ್ಲ. ನಾವೇನಿದ್ದರೂ ಸಜ್ಜನರಿಗೆ ಮಾತ್ರ ಸಹಾನುಭೂತಿ ತೋರಿಸಬಹುದು ಆದರೆ ಕೆಪಿಸಿಸಿ ಅಧ್ಯಕ್ಷರ ಹಿನ್ನೆಲೆಯೇನು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಶಿವಕುಮಾರ್ ಅವರು ಇನ್ನಾದರೂ ಪ್ರಬುದ್ಧವಾಗಿ ವರ್ತಿಸಬೇಕು. ಇಂತಹ ಒಬ್ಬ ವ್ಯಕ್ತಿಯನ್ನು ಅಧ್ಯಕ್ಷರಾಗಿ ಇಟ್ಟುಕೊಂಡಿರುವುದಕ್ಕೆ ಆ ಪಕ್ಷ ಮುಜುಗರ ಅನುಭವಿಸುತ್ತಿದೆ ಎಂದು ಸಚಿವರು ತಿಳಿಸಿದರು.

