ಮೈಸೂರು: ತಾವು ಕೂಡ ಪಕ್ಷದಲ್ಲಿ ಇದ್ದೇನೆ ಎಂದು ತೋರಿಸಿಕೊಳ್ಳಲು ಸಿದ್ದರಾಮಯ್ಯ ಸಿಎಂ ವಿರುದ್ಧ ಹೇಳಿಕೆ ನೀಡುತ್ತಾರೆಯೇ ಹೊರತು ವಿರೋಧ ಪಕ್ಷದ ನಾಯಕರ ಕೆಲಸವನ್ನು ಅವರು ಮಾಡುತ್ತಲೇ ಇಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಟಾಂಗ್ ನೀಡಿದರು.
ದುರ್ಬಲ ಸಿಎಂ ಎಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ಸಚಿವರು ಪ್ರತಿಕ್ರಿಯಿಸಿ ಮುಖ್ಯಮಂತ್ರಿಗಳೇನೂ ದುರ್ಬಲರಿಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳಲಿ, ಸಾರ್ವಜನಿಕರಿಗೆ ಅನುಕೂಲವಾಗುವ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಈವರೆಗೆ ಒಂದೇ ಒಂದು ನೆಗೆಟಿವ್ ಕೆಲಸ ಮಾಡಿಲ್ಲ, ಯಾವುದಾದರೂ ಇದ್ದರೂ ಕ್ಯಾಬಿನೆಟ್ ಲ್ಲಿ ಸಾಧಕಬಾಧಕ ಚರ್ಚೆ ಮಾಡಿ ಒಂದೊಂದನ್ನೂ ನೂರಾರು ಬಾರಿ ಯೋಚನೆ ಮಾಡಿ ಕಾರ್ಯವನ್ನು ಸಿಎಂ ಮಾಡಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯನವರಿಗೆ ಈಗ ಅಸ್ತಿತ್ವದ ಪ್ರಶ್ನೆ, ವಿರೋಧ ಪಕ್ಷದ ನಾಯಕರು ಈಗ ಏನಾದರೂ ಮಾತಾಡಬೇಕಲ್ಲ ಅದಕ್ಕಾಗಿ ಮಾತಾಡುತ್ತಾರೆಯೇ ವಿನಃ ಯಾವುದಾದರೂ ನಿರ್ದಿಷ್ಟ ಗುರಿ ಇಟ್ಟುಕೊಂಡು ಮಾತನಾಡುತ್ತಿಲ್ಲ ಎಂದು ಟೀಕಿಸಿದರು.
ವಿರೋಧ ಪಕ್ಷದ ನಾಯಕರ ಸೌಲಭ್ಯ ಏನು ಬೇಕು ಅದನ್ನೆಲ್ಲ ತೆಗೆದುಕೊಳ್ಳುತ್ತಾರೆ. ಆದರೆ ಸರ್ಕಾರದ ಕಾರ್ಯಕ್ರಮಗಳನ್ನು ಎಲ್ಲ ಕಡೆ ವಿರೋಧ ಪಕ್ಷವೆಂದು ತೋರಿಸಲು ಏನೇನೊ ಹೇಳುತ್ತಾರೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ನಲ್ಲಿನ ಆಂತರಿಕ ಕಚ್ಚಾಟ ಕುರಿತು ಪ್ರತಿಕ್ರಿಯಿಸಿದ ಸೋಮಶೇಖರ್, ಮೊದಲು ಅಲ್ಲಿ ಕಚ್ಚಾಟ ಅಷ್ಟು ಇರಲಿಲ್ಲ, ಎಐಸಿಸಿ ಹಂತದಲ್ಲಿ ನಡೆಯುತ್ತಿತ್ತು. ಇಲ್ಲಿ ಎಲ್ಲರೂ ನಾಯಕರು ಅನ್ನೋ ರೀತಿಯಲ್ಲಿ ಹೊರಟಿದ್ದಾರೆ ಅದಕ್ಕೇ ಕಚ್ಚಾಟ ಜಾಸ್ತಿಯಾಗುತ್ತಿದೆ ಎಂದು ತಿಳಿಸಿದರು.
ಅಲ್ಲಿ ನಾಲ್ಕು ಗುಂಪಿದೆ, ನಾಲ್ಕೂ ಗುಂಪು ಪ್ರಬಲವಾಗಿದೆ.ಇವರು ಯಾರೂ ಒಬ್ಬರಿಗೊಬ್ಬರು ಸೇರಲ್ಲ,ಕಾಟಾಚಾರಕ್ಕೆ ನಗು ಮುಖದ ಪೋಸ್ ಕೊಡುತ್ತಾರೆ ಎಂದು ಗೇಲಿ ಮಾಡಿದರು.
ಸದ್ಯದಲ್ಲಿಯೇ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಕೆಲವು ಪ್ರಮುಖರು ಬಿಜೆಪಿ ಸೇರಲಿದ್ದಾರೆ ಎಂದು ಇದೇ ವೇಳೆ ಸೋಮಶೇಖರ್ ತಿಳಿಸಿದರು.
ಅಂತಿಮ ಮಾತುಕತೆ ನಂತರ ಅವರುಗಳ ಹೆಸರನ್ನು ಬಹಿರಂಗಪಡಿಸುತ್ತೇವೆ ಎಂದು ಮಾಧ್ಯಮದವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

