ಮೈಸೂರು: ಮೈಸೂರು ಕಾರ್ಪೋರೇಟರ್‌ಗಳ ವಿರುದ್ಧ ಸಂಸದ ಪ್ರತಾಪ್‌ಸಿಂಹ ಹರಿಹಾಯ್ದಿದ್ದಾರೆ.
ಮೈಸೂರು ನಗರದಲ್ಲಿ ಮಳೆ ಅವಾಂತರವಾಗಿರುವ ಹಿನ್ನಲೆಯಲ್ಲಿ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪ್ರತಾಪ್ ಸಿಂಹ ಈ ವೇಳೆ ನಗರಪಾಲಿಕೆ ಸದಸ್ಯರುಗಳ ಕಾರ್ಯವೈಖರಿಗೆ ಕಿಡಿಕಾರಿದರು.
ಸಂಕಷ್ಟಕ್ಕೀಡಾಗಿರುವವರ ಸಮಸ್ಯೆ ಕೇಳದ ಕಾರ್ಪೊರೇಟರ್‌ಗಳ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಏರಿಯಾಗಳಲ್ಲಿ ಒಳಚರಂಡಿ ಸರಿ ಇಲ್ವಾ, ಕಸ ತೆಗೆದಿಲ್ಲವಾ, ಒಳಚರಂಡಿ ತುಂಬಿ ಹರಿಯುತ್ತಿದೆಯೇ ಅಥವಾ ಇನ್ಯಾವುದೇ ಸಮಸ್ಯೆ ಇದ್ದರೆ ಆಯಾ ನಗರಪಾಲಿಕೆ ಸದಸ್ಯರ ಮನೆ ಮುಂದೆ ಧರಣಿ ಕುಳಿತುಕೊಳ್ಳಿ ಎಂದು ಸ್ಥಳೀಯರಿಗೆ ಸಲಹೆ ನೀಡಿದರು.
ನಗರಪಾಲಿಕೆ ಸದಸ್ಯರ ಕುತ್ತಿಗೆ ಪಟ್ಟಿ ಹಿಡಿದು ಕೆಲಸ ಮಾಡಿ ಅಂತಾ ಕೇಳಿ.ಯಾವಾಗ ನಿಮ್ಮ ಕಾರ್ಪೊರೇಟರ್ಗಳ ಕುತ್ತಿಗೆ ಪಟ್ಟಿ ಹೀಡಿತೀರೋ ಆಗ ಮಾತ್ರವೇ ನಿಮ್ಮ ಕೆಲಸ ಆಗುತ್ತದೆ ಎಂದು ಎಂದು ಗರಂ ಆಗಿ ಹೇಳಿದರು.
ನಾನು ಕಾರ್ಪೋರೇಟರ್ ಕೆಲಸ ಮಾಡಬೇಕೆಂದರೂ ತೊಂದರೆಯಿಲ್ಲ, ಅದನ್ನೂ ಮಾಡ್ತೀನಿ ಆದರೆ, ನಗರದಲ್ಲಿ 65 ಮಂದಿ ಪಾಲಿಕೆ ಸದಸ್ಯರಿದ್ದಾರೆ ಅವ್ರು ಏನ್ಮಾಡ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.
ಏರಟೆಲ್ ನವರಿಗೆ ಕೇಬಲ್ ಹಾಕಲು ರಸ್ತೆ ಅಗೆಯಲು ಕೊಡುತ್ತಾರೆ, ಅದೇ ಗ್ಯಾಸ್ ಪೈಪ್ ಲೈನ್ ಗೆ ವಿರೋಧಿಸುತ್ತಾರೆ.ಇಂತಹ ಮನಸ್ಥಿತಿಯವರನ್ನ ಜನ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಹೋಗಿ ಕಾರ್ಪೊರೇಟರ್‌ಗಳ ಕುತ್ತಿಗೆ ಹಿಡಿದು ಕೆಲಸ ಮಾಡಿ ಅಂತಾ ಹೇಳಿ. ಪ್ರತಿಯೊಂದಕ್ಕೂ ನಾನು ಬರುವುದಕ್ಕೆ ಆಗಲ್ಲ ಎಂದು ಜನರಿಗೆ ಪ್ರತಾಪ್ ಸಿಂಹ ಹೇಳಿದರು.
ವಿದ್ಯಾರಣ್ಯಪುರಂ ಕಸ ಘಟಕದಲ್ಲಿನ ಕಸ ತೆಗೆಸುವ ಕೆಲಸವನ್ನು ನಾನೇ ಮಾಡಿಸುತ್ತಿದ್ದೇನೆ. ಗ್ರೇಟರ್ ಮೈಸೂರು ಆದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬುದನ್ನು ಅರಿತು ಅದಕ್ಕೂ ನಾನೇ ಓಡಾಡುತ್ತಿದ್ದೇನೆ ಎಂದರು.
ಪ್ರತಿನಿತ್ಯದ ಸಮಸ್ಯೆಗೆ ನಿಮ್ಮ ನಿಮ್ಮ ನಗರಪಾಲಿಕೆ ಸದಸ್ಯರ ಮನೆ ಮುಂದೆ ಹೋಗಿ ಧರಣಿ ಕೂರುವುದನ್ನು ಕಲಿತುಕೊಳ್ಳಿ.ಆಗ ತಾನಾಗಿಯೇ ಎಲ್ಲಾ ಕೆಲಸಗಳು ಸರಿಯಾಗುತ್ತವೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

