ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಕೊನೆಗಾಲದಲ್ಲಿರುವುದನ್ನು ಆ ಪಕ್ಷದ ನಾಯಕ ರಾಹುಲ್‌ ಗಾಂಧಿ ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್ ಚಿಂತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ರಾಹುಲ್ ಗಾಂಧಿ ಪ್ರಾದೇಶಿಕ ಪಕ್ಷಗಳಿಗೆ ಸೈದ್ಧಾಂತಿಕ ಬದ್ಧತೆ ಇಲ್ಲವೆಂದು ವ್ಯಾಖ್ಯಾನ ಮಾಡಿದ್ದಾರೆ,ಸೈದ್ಧಾಂತಿಕ ಬದ್ಧತೆ ಎಂದರೆ ಏನು‌‌ ಎಂಬುದನ್ನು ರಾಹುಲ್‌ಗಾಂಧಿ ಅವರು ಪ್ರಾದೇಶಿಕ ಪಕ್ಷಗಳಿಗೆ ಸ್ವಲ್ಪ ಬಿಡಿಸಿ ಹೇಳಬೇಕು ಎಂದಿದ್ದಾರೆ.

ಈ ಬಗ್ಗೆ ‌ಟ್ವೀಟ್ ಮಾಡಿರುವ ಅವರು, ಯುಪಿಎ 1 ಮತ್ತು 2 ಸರ್ಕಾರಗಳಲ್ಲಿ ಆಗಿನ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಸಂಪುಟದಲ್ಲಿ ಅದೇ ಡಿಎಂಕೆಯ ಜತೆ 10 ವರ್ಷ ಅಧಿಕಾರದ ಸೋಪಾನ ಹಂಚಿಕೊಂಡಿದ್ದು ಸೈದ್ಧಾಂತಿಕ ಬದ್ಧತೆಯೆ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸೋಲಿಸುವ ಶಕ್ತಿ ಕಾಂಗ್ರೆಸ್‌ಗೆ ಮಾತ್ರ ಇದೆ ಎನ್ನುವ ರಾಹುಲ್‌ ಗಾಂಧಿ ಅವರು, ತಮ್ಮ ಪಕ್ಷ 10 ವರ್ಷ ಅಧಿಕಾರದ ಸುಖ ಅನುಭವಿಸಿದ್ದು ಪ್ರಾದೇಶಿಕ ಪಕ್ಷಗಳ ಶಕ್ತಿ ಮತ್ತು ದಾಕ್ಷಿಣ್ಯದಿಂದ ಎನ್ನುವುದನ್ನು ಮರೆಯಬಾರದು ಎಂದು ಟೀಕಿಸಿದ್ದಾರೆ.

ಮೈತ್ರಿ ಸರ್ಕಾರ ಮಾಡೋಣ ಎಂದು ಮನೆ ಬಾಗಿಲಿಗೆ ಬಂದು, ಸರ್ಕಾರವನ್ನೂ ಮಾಡಿ ಹಿಂಬಾಗಿಲಿನಿಂದ ಆಪರೇಷನ್‌ ಕಮಲವೆಂಬ ಅನೈತಿಕ ರಾಜಕಾರಣಕ್ಕೆ ಕೈಜೋಡಿಸಿದ್ದು ಸೈದ್ಧಾಂತಿಕ ಬದ್ಧತೆಯೆ ಎಂದು ಎಚ್‌ ಡಿ ಕೆ ಕಿಡಿ ಕಾರಿದ್ದಾರೆ.