ರಾಜ್ಯದಲ್ಲಿ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ -ಆರಗ ಜ್ಞಾನೇಂದ್ರ

ಬೆಂಗಳೂರು: ಮತಾಂತರ ನಿಷೇಧ ಕಾಯಿದೆ ಯಾವುದೇ ಧರ್ಮದ ವಿರುದ್ಧ ರೂಪಿತವಾಗಿಲ್ಲ, ಆದರೆ ಯಾವುದೇ ರೀತಿಯ ಆಮಿಷ ಅಥವಾ ಬಲವಂತದ  ಮತಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವ  ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾದ ಮತಾಂತರ ನಿಷೇಧ (ತಿದ್ದುಪಡಿ) ವಿಧೇಯಕಕ್ಕೆ ವಿಧಾನ ಸಭೆಯಿಂದ ಅಂಗೀಕಾರ ಪಡೆಯಲಾಗಿದೆ ಎಂದು ಹೇಳಿದರು.

ವಿಧನಸಭೆಯಲ್ಲಿ ಮಂಡಿತವಾಗಿರುವ ಮಸೂದೆಗೆ ಮುಂದಿನ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲಾಗುವುದು, ಸರಕಾರ ಹೊರಡಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಮ್ಮತಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಕ್ರೈಸ್ತ ಧಾರ್ಮಿಕ ಮುಖಂಡರು, ರಾಜ್ಯಪಾಲರನ್ನು ಭೇಟಿಯಾಗಿ ಮತಾಂತರ ಮಸೂದೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಸಂವಿದಾನ  ದತ್ತವಾಗಿ ಇರುವ ಧಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸುವ ಯಾವುದೇ ಪ್ರಸ್ಥಾವ ತಿದ್ದುಪಡಿ ಮಸೂದೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ,  ಕಾಂಗ್ರೆಸ್ ಸರಕಾರ ಮತಾಂತರ ನಿಷೇಧ ಕಾಯಿದೆ ತಂದಿದ್ದನ್ನು ನಮ್ಮ ಸರಕಾರ ಮತ್ತಷ್ಟು ಬಲಗೊಳಿಸಿ ಕಟ್ಟು ನಿಟ್ಟಾಗಿ ಜಾರಿಗೆ ತರಲು ಬದ್ಧವಾಗಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.