ಮೈಸೂರು: ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಕೃತಕ ಅಭಾವ ಸೃಷ್ಟಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ ನೀಡಿದರು.
ಮೈಸೂರಿನಲ್ಲಿ ಗುರುವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಸಗೊಬ್ಬರವನ್ನು ಸಬ್ಸಿಡಿ ದರದಲ್ಲಿ ಮಾರುತ್ತಿದ್ದೇವೆ. ಕಾಳಸಂತೆಕೋರರ ಪತ್ತೆಗೆ ಸ್ಕ್ವಾಡ್ ರಚಿಸಲಾಗಿದೆ. ಬಿತ್ತನೆ ಬೀಜದ ಕೊರತೆಯಾಗದಂತೆಯೂ ಕ್ರಮ ವಹಿಸಲಾಗಿದೆ ಎಂದವರು ತಿಳಿಸಿದರು.
ಮಳೆಹಾನಿ ಬಗ್ಗೆಯೂ ವರದಿಯನ್ನು ನೀಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿಯ ಆಧಾರದ ಮೇಲೆ ಪರಿಹಾರವನ್ನು ನೀಡಲಾಗುತ್ತದೆ. ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಸಿಎಂ ಆದರೆ ದಲಿತರ ಸಾಲಮನ್ನಾ ಎಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾದರೆ ತಾನೇ ಭರವಸೆ ಈಡೇರುವುದು. ಕಾಂಗ್ರೆಸ್ ನಲ್ಲಿ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಮುಂದಿನ ಬಾರಿಯೂ ಅಧಿಕಾರಕ್ಕೆ ಬರುವುದು ನಿಶ್ಚಿತ. ಸಿದ್ದರಾಮಯ್ಯನವರಿಗೆ ಬಿಜೆಪಿಯ ಕುರಿತು ಹೇಳಲು ಏನೂ ಉಳಿದಿಲ್ಲ. ನಮ್ಮ ಸರ್ಕಾರದಿಂದ ಸಿದ್ದರಾಮಯ್ಯನವರಿಗೆ ಪ್ರಯೋಜನವಾಗುತ್ತಿಲ್ಲ. ಸಾರ್ವಜನಿಕರಿಗೆ ಪ್ರಯೋಜನವಾಗುತ್ತಿದೆ ಎಂದು ಕೃಷಿ ಸಚಿವರು ಮಾರ್ಮಿಕವಾಗಿ ಹೇಳಿದರು.

