ಮೈಸೂರು, ಮೇ 19- ಮೈಸೂರಿಗೆ ಸಿದ್ದರಾಮಯ್ಯನವರ ಕೊಡುಗೆ ಏನು ಎಂದು ಕೇಂದ್ರ ಸರ್ಕಾರದ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಗುರುವಾರ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿಯಾಗಿದ್ದ, ದಶಕಗಳ ಕಾಲ ಮೈಸೂರಿನಲ್ಲಿ ರಾಜಕಾರಣ ನಡೆಸಿದ ಸಿದ್ದರಾಮಯ್ಯನವರು ಮೈಸೂರಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.
ನಾನು ಮೈಸೂರಲ್ಲಿ ನಿಂತು ಸಿದ್ದರಾಮಯ್ಯನವರಿಗೆ ಕೇಳಲು ಇಷ್ಟಪಡುತ್ತೇನೆ ಮೈಸೂರಿಗೆ ಅವರ ಕೊಡುಗೆ ಏನು? 5 ವರ್ಷ ಕಾಲ ನೀವು ಮುಖ್ಯಮಂತ್ರಿಗಳಾಗಿ ಅದಕ್ಕೂ ಹಿಂದೆ ಇಷ್ಟೊಂದು ದಶಕಗಳ ಕಾಲ ಮೈಸೂರಲ್ಲಿ ರಾಜಕಾರಣ ಮಾಡಿ ಮೈಸೂರಿಗೆ ನಿಮ್ಮ ಕೊಡುಗೆ ಏನು? ಇದನ್ನು ಅವರು ಎದೆಮುಟ್ಟಿಕೊಂಡು ಹೇಳಬೇಕಿದೆ ಎಂದರು.
ಸಿದ್ದರಾಮಯ್ಯನವರಿಗೆ ಚುನಾವಣೆಯ ಭಯ ಕಾಡುತ್ತಿದೆ. ಅವರಲ್ಲೇ ಪರಸ್ಪರ ಸ್ಪರ್ಧೆ ಆರಂಭವಾಗಿದೆ. ಡಿ.ಕೆ.ಶಿವಕುಮಾರ್ ಮೇಲೋ, ಸಿದ್ದರಾಮಯ್ಯ ಮೇಲೋ ಅಂತ. ಈ ಕಾರಣಕ್ಕಾಗಿ ಇಬ್ಬರೂ ಕೂಡ ಬಾಯಿಗೆ ಬಂದ ರೀತಿಯಲ್ಲಿ ಭಯದಿಂದ ಒಂದು ಹೇಳಿಕೆಯನ್ನು ಕೊಡುತ್ತಿದ್ದಾರೆಂದರು.
ಸಿದ್ದರಾಮಯ್ಯನವರಿಗೆ ಐದು ವರ್ಷಗಳ ಕಾಲ ರಾಜ್ಯ ಅವಕಾಶವನ್ನು ಕೊಟ್ಟಿತ್ತು. ಅಂತಹ ಕಾಲದಲ್ಲಿ ಅವರು ಗೊಂದಲ ನಿರ್ಧಾರ ಮಾಡಿ ಟಿಪ್ಪು ಜಯಂತಿ ಆಚರಣೆ ಮಾಡುವುದು, ಹಿಂದುಳಿದ ವರ್ಗಗಳನ್ನು ಒಡೆದರು. ಲಿಂಗಾಯತರನ್ನು, ವೀರಶೈವರನ್ನೂ ಒಡೆದು ಆಳು ಇಂತಹುದನ್ನು ಮಾಡಿದ್ದು ಬಿಟ್ಟರೆ ಅವರು ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಮೈಸೂರಿನ ಸಮಸ್ಯೆಗಳನ್ನು ಬಗೆಹರಿಸಲು ನಾವು ಪ್ರಯತ್ನ ಮಾಡಿದ್ವಿ. ಅಲ್ಪ ಅವಧಿಯಲ್ಲಿ ಪ್ರಯತ್ನಗಳನ್ನು ಮಾಡಿದ್ದೇವೆ. ಅದಕ್ಕಾಗಿ ಅವರು ಭಯದಿಂದ ಇಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆಂದರು.
ಚುನಾವಣೆಯ ವರ್ಷದಲ್ಲಿ ಕೊಡುವಂತಹ ಯಾವುದೇ ಹೇಳಿಕೆಗೆ ಯಾವುದೇ ಬೆಲೆ ಇರುವುದಿಲ್ಲ. ಜನ ಅವರನ್ನು ನೋಡಿದ್ದಾರೆ. ಅವರ ಗೋಮುಖ ವ್ಯಾಘ್ರತನವನ್ನು ನೋಡಿದ್ದಾರೆ. ಅವರ ಇಬ್ಬಗೆಯ ನೀತಿಯನ್ನೂ ನೋಡಿದ್ದಾರೆ. ಜನ ಒಂದು ಸಲ ಅವರನ್ನು ನೋಡಿದ ಮೇಲೆ ಇನ್ನೊಂದು ಸಲ ಬೆಂಬಲ ಕೊಡುತ್ತಾರೆಂದು ನಮಗೆ ಅನಿಸಲ್ಲ ಎಂದರು.
ನೀವು ರಾಜ್ಯ ರಾಜಕಾರಣದತ್ತ ಒಲವು ಹೊಂದಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನಾನು ಬೇರೆ ಯಾವುದೇ ಅವಕಾಶದ ಯೋಚನೆ ಮಾಡಿಲ್ಲ. ಊಹಾಪೆÇೀಹ ನಡೆಯುತ್ತಿದ್ದರೂ ನನಗೆ ಅದರ ಬಗ್ಗೆ ಮಾಹಿತಿ ಇಲ್ಲವೆಂದು ಉತ್ತರಿಸಿದರು.

