ಪಠ್ಯದಲ್ಲಿ ಕೇಸರೀಕರಣ ಅಪಾಯಕಾರಿ: ಸ್ವಪಕ್ಷದ ವಿರುದ್ಧ ಹಳ್ಳಿಹಕ್ಕಿ ಕಿಡಿ

ಮೈಸೂರು: ಪಠ್ಯಪುಸ್ತಕದಲ್ಲಿ ಕೇಸರೀಕರಣ ನುಸುಳುತ್ತಿರುವುದು ನಿಜಕ್ಕೂಅಪಾಯಕಾರಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ವಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಧರ್ಮ ಆಧಾರಿತ ಪಠ್ಯ ಯಾವುದೇ ಕಾರಣಕ್ಕೂ ಬೇಡ ಎಂದು ಹೇಳಿದರು.

ಯಜ್ಞಕುಂಡ ಯಾವ ಕಡೆ ಇರಬೇಕು ಎಂಬ ಪಠ್ಯ ಬೋಧನೆ ಯಾರಿಗೆ ಬೇಕು,ಪಠ್ಯದಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರ ನಾರಾಯಣಗುರು ಕೈಬಿಡುವುದು ತಪ್ಪು  ಬಾಯಿಗೆ ಬಂದ ಹಾಗೆ ಯಾರಯಾರದ್ದೋ ಪಠ್ಯ ಸೇರಿಸಿದರೆ ಹೇಗೆ ಎಂದು ಕಿಡಿಕಾರಿದರು.

ಹೆಗಡೆವಾರ್ ಯಾರು ಎಂದು ಗೊತ್ತಿಲ್ಲ. ಹೆಗಡೆವಾರಿಗೂ ಟಿಪ್ಪುಗೂ ಹೋಲಿಕೆ ಮಾಡುತ್ತಿದ್ದೀರಾ ಅದು ಸರಿ ಅಲ್ಲ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ಚರಿತ್ರೆ ಗೊತ್ತಿಲ್ವಾ ಎಂದು ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಮಳೆಯಿಂದ ಅನಾಹುತವಾಗಿದೆ ಮೈಸೂರು ಜಿಲ್ಲಾ ಮಂತ್ರಿ ಎಲ್ಲಿ ಹೋದರು ಖುದ್ದು ಬಂದು ನೋಡಬೇಕು ತಾನೇ, ಯಾಕೆ ಎಲ್ಲೂ ಹೋಗುತ್ತಿಲ್ಲ ಏನಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧ ಇದೇ ವೇಳೆ ವಿಶ್ವನಾಥ್ ಕಿಡಿಕಾರಿದರು.

ಸಿಎಂ ಎಲ್ಲಾ ಕಡೆ ಹೋಗಿ ಜನರ ಸಂಕಷ್ಟ ಆಲಿಸುತ್ತಿದ್ದಾರೆ. ಮೋದಿ ಅವರು ಮೈಸೂರನ್ನು ಪ್ಯಾರೀಸ್ ಮಾಡುತ್ತೇವೆ ಎಂದು ಹೇಳಿದ್ದರು. ಈಗ ಮೈಸೂರು ಕೊಳಚೆಯಾಗುತ್ತಿದೆ. ಇದನ್ನು ಅವರು ಗಮನಿಸಬೇಕು. ಕೇಂದ್ರ ಸರ್ಕಾರದಿಂದ ಹೆಚ್ಚಿನ ಹಣ ಕೊಡುವಂತೆ ರಾಜ್ಯದ ಮಂತ್ರಿಗಳು ಕೇಳಬೇಕು ಎಂದು ಆಗ್ರಹಿಸಿದರು.

ಒತ್ತುವರಿ ತೆರವು ಕುರಿತು ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಒತ್ತುವರಿ ತೆರವು ಆರಂಭಿಸಿದ್ದರು. ಆ ಜಾಗದಲ್ಲಿ ಶ್ರೀಮಂತ ನಟ, ರಾಜಕಾರಣಿ ಮನೆ ಇದೆ ಅಂತ ನಿಲ್ಲಿಸಿದ್ದರು.

ಶ್ರೀಮಂತರ ಮನೆ ಮಾತ್ರ ಹಾಗೆಯೇ ಉಳಿಯಿತು. ಬಡವರು ಮನೆ ಕಳೆದುಕೊಂಡು ಬೀದಿಗೆ ಬಿದ್ದರು ಎಂದು ವಿಶ್ವನಾಥ್ ವಾಗ್ದಾಳಿ ನಡೆಸಿದರು.