ಮೈಸೂರು: ಶೇ. 70ರಷ್ಟು ಅಡುಗೆ ಎಣ್ಣೆ ವಿದೇಶದಿಂದ ಆಮದಾಗುತ್ತಿದ್ದು ನಮ್ಮ ದೇಶ ಇದರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿದೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಲೇಷಿಯಾ ಹಾಗೂ ಇಂಡೋನೇಷ್ಯಾ ದಿಂದ ಪಾಮ್ ಆಯಿಲ್ ಬರುತ್ತದೆ ಅದನ್ನ ಭಾರತದಲ್ಲಿ ರಿಫೈನರಿ ಮಾಡಿ ಬೇರೆ ಬೇರೆ ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.
ಹಾಗಾಗಿ ತೈಲ ಬೆಳೆಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ, ಮುಂದಿನ ದಿನಗಳಲ್ಲಿ ಖಾದ್ಯ ತೈಲದ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ನೀಡಲು ವಿಶೇಷ ಕಾನೂನು ತರುತ್ತಿದ್ದೇವೆ ಎಂದು ಇದೇ ವೇಳೆ ಸಚಿವರು ಹೇಳಿದರು.
ಕರೊನಾ ಕಾರಣದಿಂದ ಈ ವರ್ಷ ಪೊಟಾಶ್ ಕಡಿಮೆ ಸಿಕ್ಕಿದೆ,ಮುಂದಿನ ಎರಡು ವರ್ಷಗಳಲ್ಲಿ ರಸಗೊಬ್ಬರದಲ್ಲಿ ಸ್ವಾವಲಂಭಿಯಾಗುವುದು ನಮ್ಮ ಗುರಿ ಎಂದು ಹೇಳಿದರು.
ಕೃಷಿ ಉತ್ಪನ್ನಗಳ ದೇಶಗಳ ಪೈಕಿ ಭಾರತ 10ನೇ ಸ್ಥಾನದೊಳಗೆ ಬರಬೇಕು. ಈ ಭಾರಿ 9ನೇ ಸ್ಥಾನಕ್ಕೆ ಬಂದು ನಿಲ್ಲುವ ವಿಶ್ವಾಸವಿದೆ ಎಂದು ಶೋಭಾ ಕರದ್ಲಾಂಜೆ ತಿಳಿಸಿದರು.
ಕಳೆದ ವರ್ಷ ಉತ್ತರಖಾಂಡ ರಾಜ್ಯ ಸಿರಿಧಾನ್ಯವನ್ನ ಅತಿ ಹೆಚ್ಚಾಗಿ ರಫ್ತು ಮಾಡಿದೆ. ನಮ್ಮ ಉದ್ದೇಶ ಕೇವಲ ಕೃಷಿ ಮಾಡುವುದಲ್ಲ ಅದರೊಂದಿಗೆ ಅದನ್ನ ಮಾರಾಟ ಮಾಡುವುದನ್ನ ಕಲಿಸುವುದು ಎಂದು ಶೋಭಾ ತಿಳಿಸಿದರು.
ನಮ್ಮ ದೇಶದಲ್ಲಿ 90 ರಷ್ಟು ಸಣ್ಣ ಹಾಗೂ ಮಧ್ಯಮ ಕೃಷಿಕರಿದ್ದಾರೆ. ಇಡೀ ದೇಶದಲ್ಲಿ ನಗರಕ್ಕೆ ಹತ್ತಿರವಿರುವ ಭೂಮಿ ಸೈಟ್ ಗಳಾಗುತ್ತಿದೆ. ಸಣ್ಣ ಹಾಗೂ ಮಧ್ಯಮ ಕೃಷಿಕರನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಸಂಘಗಳನ್ನ ಮಾಡಿದೆ.
ಕೇಂದ್ರ ಸರ್ಕಾರ ವರ್ಷಕ್ಕೆ 6 ಸಾವಿರ ಹಣವನ್ನ ರೈತರಿಗೆ ನೇರವಾಗಿ ಅವರ ಅಕೌಂಟ್ ಗೆ ಹಾಕುತ್ತಿದೆ ಎಂದು ಹೇಳಿದರು.

