ಹಿಂದುತ್ವ ಒಡೆಯಲು ಕಾಂಗ್ರೆಸ್ ಯತ್ನ -ಶಿಕ್ಷಣ ಸಚಿವ ನಾಗೇಶ್

ಚಾಮರಾಜನಗರ: ಪಠ್ಯ ಪುಸ್ತಕ ವಿಚಾರವನ್ನು ರಾಜಕೀಯಗೊಳಿಸಲು ಹಾಗೂ ಹಿಂದು ಧರ್ಮವನ್ನು ಒಡೆಯಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆರೋಪಿಸಿದರು.

ನಗರದ ಜೆಎಸ್‍ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಎಲ್ಲ ಸಮಯದಲ್ಲೂ ಯಾವುದೇ ಪರಿಷ್ಕರಣೆಯಾದಾಗ ಗೊಂದಲಗಳಿರುತ್ತವೆ. ವೈಚಾರಿಕವಾಗಿ ಕೆಲವು ವಿಚಾರದಲ್ಲಿ ವಾದ ಮಾಡಲು ಹತಾಶರಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‍ನವರು ಹಿಜಾಬ್ ಅನ್ನು ರಾಜಕೀಯ ಅಸ್ತ್ರವಾಗಿ ಬಳಸಲು ಪ್ರಯತ್ನಿಸಿ ವಿಫಲರಾದರು. ಕೋವಿಡ್‍ನಲ್ಲಿ ಶಾಲೆಗಳನ್ನು ಪ್ರಾರಂಭಿಸಿದಾಗ ಈ ರೀತಿಯ ಮಾತುಗಳನ್ನಾಡಿ ವಿಫಲರಾದರು. ಉತ್ತರ ಪ್ರದೇಶ ಚುನಾವಣೆ ಬಳಿಕ ಕಾಂಗ್ರೆಸ್ ದೇಶದಲ್ಲಿ ಎಲ್ಲೂ ಇಲ್ಲದಾಗಿ ಬಿಡುತ್ತದೆಯೋ ಎಂಬ ಭಯ ಶುರುವಾಗಿ ಸರ್ಕಾರದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.

ಶಿಕ್ಷಣದಲ್ಲಿ ವೈಚಾರಿಕ ಹೋರಾಟಗಳು ನಡೆಯಲಿ ಭಿನ್ನತೆ ಯಾವತ್ತೂ ಇರುತ್ತದೆ. ತಾತ್ವಿಕ ಭಿನ್ನತೆ ಚರ್ಚೆಗೆ ಸಿದ್ಧರಿದ್ದೇವೆ. ಸುಳ್ಳನ್ನು ದಿನ ಪ್ರಚಾರ ಮಾಡಿ ಸುಳ್ಳನ್ನು ನಿಜ ಮಾಡುತ್ತೇವೆ ಎಂದು ಹೋದಾಗ ಜವಬ್ದಾರಿಯುತ ಸರ್ಕಾರವಾಗಿ ಹೇಳಲಾಗಿದೆ. ಪರಿಷ್ಕರಣಾ ಸಮಿತಿ ರಚನೆ ಮಾಡಿ 8 ತಿಂಗಳಾಗಿದ್ದು ಅಲ್ಲಿಂದ ಮಾತನಾಡದೆ ಪಠ್ಯ ಕೈಬಿಟ್ಟಿದ್ದಾರೆ ಎಂಬ ಸುಳ್ಳು ಆರೋಪವನ್ನು ಮಾಡಿದರು. ಆದರೆ, ಪಠ್ಯ ಪುಸ್ತಕ ಆಚೆ ಬಂದು ಕಾಂಗ್ರೆಸ್‍ನವರು ಹೇಳಿದ್ದೆಲ್ಲ ಸುಳ್ಳು ಎಂದು ಗೊತ್ತಾಯಿತೋ ಆಗ ಟಿಪ್ಪು ಸುಲ್ತಾನ್, ಭಗತ್ ಸಿಂಗ್, ನಾರಾಯಣ ಗುರು, ಬಸವಣ್ಣ, ಕುವೆಂಪು ಅವರನ್ನು ಪಠ್ಯದಿಂದ ಕೈ ಬಿಡಲಾಗಿದೆ ಎಂದು ಆರೋಪಿಸಲಾಯಿತು. ಈ ಆರೋಪಗಳೆಲ್ಲ ಸುಳ್ಳು ಎಂದು ಗೊತ್ತಾದಾಗ ಕೊನೆಗೆ ಜಾತಿಯ ಹೋರಾಟಕ್ಕೆ ಮುಂದಾದರು ಎಂದರು.

ಕಾಂಗ್ರೆಸ್ ವೈಚಾರಿಕ ಅಧಃಪತನಕ್ಕೆ ಬಂದಿದೆ. ಪಠ್ಯ ಪುಸ್ತಕ ಈಗಾಗಲೇ ಬಂದಿದ್ದು ಅದನ್ನು ಮುಚ್ಚಿಡಲು ಸಾಧ್ಯವಿಲ್ಲ. ಯಾರು ಬೇಕಾದರೂ ತೆಗೆದು ನೋಡಬಹುದು. ಹಳೆಯದರಲ್ಲಿ ಕಾಂಗ್ರೆಸ್‍ನವರು ಮೈಸೂರು ಮಹರಾಜರ ಪಠ್ಯವನ್ನು ತೆಗಿಲಿಲ್ಲವಾ. ಒಂದು ಪೇಜ್ ಇದ್ದ ಟಿಪ್ಪು ಸುಲ್ತಾನ್ ಪಠ್ಯ ಐದು ಪುಟ ಆಗಲಿಲ್ಲಾ ಎಂದರು.

ದೇವನೂರು ಮಹಾದೇವ ಅವರ ಬಗ್ಗೆ ಅಪಾರವಾದ ವಿಶ್ವಾಸವಿದೆ. ಅಲ್ಲದೇ ಅವರ ಬುದ್ದಿವಂತಿಕೆ, ಹೋರಾಟದ ಬಗ್ಗೆ ಕಳಕಳಿಯೂ ಇದೆ. ಅವರು ಯಾವ ಒತ್ತಡದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಾನು ಅವರನ್ನು ಭೇಟಿ ಮಾಡಲಿದ್ದೇನೆ. ಪರಿಷ್ಕರಣಾ ಸಮಿತಿ ಆಗಿ ತುಂಬಾ ತಿಂಗಳಾಗಿದೆ. ಪುಸ್ತಕಗಳೆಲ್ಲ ಪ್ರಿಂಟ್ ಆಗಿ ಆಚೆ ಬಂದಿದ್ದು ಮಕ್ಕಳ ಕೈ ಸೇರುವ ಹಂತದಲ್ಲಿದೆ ಎಂದರು.

ರವಿಶಂಕರ್ ಗೆಲುವು ನಿಶ್ಚಿತ : ಮೈ.ವಿ.ರವಿಶಂಕರ್ ಪರ ವಾತಾವರಣ ತುಂಬಾ ಚೆನ್ನಾಗಿದ್ದು ರವಿ ಅವರು ಗೆಲ್ಲುವ ವಿಶ್ವಾಸವಿದೆ. ಕಳೆದ 30 ವರ್ಷಗಳಿಂದಲೂ ಒಂದೇ ವಿಚಾರಕ್ಕೋಸ್ಕರ ಪೂರ್ಣ ಸಮಯ ಕೊಟ್ಟು ಸಂಘಟನೆ ಕಟ್ಟಿ ಕೆಲಸ ಮಾಡಿದ ಸಾಮಾನ್ಯ ಕಾರ್ಯಕರ್ತರಾಗಿದ್ದಾರೆಂದರು.

ಕಳೆದ ಬಾರಿಯ ಚುನಾವಣೆಯಲ್ಲಿ 150 ಮತಗಳಿಂದ ಸೋತರು ಜನರ ಪರವಾಗಿ ಕೆಲಸ ಮಾಡಲು ಯಾವುದೇ ರೀತಿಯ ಹಿಂದೇಟು ಹಾಕದೆ ಪ್ರಾಮಾಣಿಕ ಕಾರ್ಯಕರ್ತನಾಗಿ ದೇಶ ಸೇವೆ ಮಾಡುತ್ತಿದ್ದಾರೆ. ಎಲ್ಲ ಕಡೆ ಶಿಕ್ಷಕರನ್ನು ಹಾಗೂ ಪದವೀಧರರನ್ನು ಭೇಟಿ ಮಾಡಿದಾಗ ಎಲ್ಲ ಕಡೆ ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಬಳಿಕ ಸಚಿವರು ಕಾಲೇಜಿನ ಶಿಕ್ಷಕರು ಹಾಗೂ ಪದವೀಧರರ ಬಳಿ ಮೈ.ವಿ.ರವಿಶಂಕರ್‍ಗೆ ಮತ ನೀಡುವಂತೆ ಮತಯಾಚನೆ ಮಾಡಿದರು.