ನವದೆಹಲಿ: ಹಿಂದಿನ ಸರ್ಕಾರಗಳ ಅವಧಿಯಲ್ಲಿ ತಂತ್ರಜ್ಞಾನವನ್ನು ಸಮಸ್ಯೆಯ ಒಂದು ಭಾಗವೆಂದೇ ಪರಿಗಣಿಸಲಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು.
ಶುಕ್ರವಾರ ನಡೆದ ಭಾರತ್ ಡ್ರೋಣ್ ಮಹೋತ್ಸವ 2022 ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿಯವರು
ಮಾತನಾಡಿದರು.
2014ಕ್ಕಿಂತ ಮೊದಲು ತಂತ್ರಜ್ಞಾನವನ್ನು ಬಡವರ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗಿತ್ತು. ಇದರಿಂದಾಗಿ 2014ಕ್ಕಿಂತ ಮೊದಲು ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಯ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿತ್ತು. ಪರಿಣಾಮ ಬಡವರು, ವಂಚಿತರು, ಮಧ್ಯಮ ವರ್ಗದವರು ಹೆಚ್ಚು ತೊಂದರೆ ಅನುಭವಿಸಿದರು ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರ ಬಡವರು ಮತ್ತು ಮಧ್ಯಮ ವರ್ಗದವರ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಿದೆ. ಅವರ ಜೀವನ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಆದ್ಯತೆ ನೀಡಲಾಗುತ್ತಿದೆ. ಇಂದು ಡ್ರೋಣ್ ತಂತ್ರಜ್ಞಾನದ ಬಗ್ಗೆ ಭಾರತದಲ್ಲಿ ಕಂಡುಬರುತ್ತಿರುವ ಉತ್ಸಾಹ ಅದ್ಭುತವಾಗಿದೆ. ಇದು ದೇಶದಲ್ಲಿ ಉದ್ಯೋಗ ಸೃಷ್ಟಿಯನ್ನು ಸೂಚಿಸುತ್ತಿದೆ ಎಂದು ಮೋದಿ ಹೇಳಿದರು.
ಡ್ರೋಣ್ ಗಳನ್ನು ಪ್ರಸ್ತುತ ಕಣ್ಗಾವಲು, ಸಮೀಕ್ಷೆ, ಸಾರಿಗೆ, ಕೃಷಿ, ಕ್ರೀಡೆ, ರಕ್ಷಣೆ ಮತ್ತು ವಿಪತ್ತು ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ. ಎಮದ ಪ್ರಧಾನಿಗಳು, ಮೊದಲ ಬಾರಿಗೆ ಹಳ್ಳಿಗಳಲ್ಲಿನ ಪ್ರತಿಯೊಂದು ಆಸ್ತಿಯನ್ನು ಡಿಜಿಟಲ್ ಮ್ಯಾಪ್ ಮಾಡಲಾಗುತ್ತಿದೆ ಮತ್ತು ಡಿಜಿಟಲ್ ಆಸ್ತಿ ಕಾರ್ಡ್‍ಗಳನ್ನು ಜನರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಭಾರತ್ ಡ್ರೋಣ್ ಮಹೋತ್ಸವ 2022 ಎರಡು ದಿನಗಳ ಕಾರ್ಯಕ್ರಮವಾಗಿದ್ದು, ಇದನ್ನು ಮೇ 27 ಮತ್ತು 28 ರಂದು ಆಯೋಜಿಸಲಾಗಿದೆ. ಸರ್ಕಾರಿ ಅಧಿಕಾರಿಗಳು, ವಿದೇಶಿ ರಾಜತಾಂತ್ರಿಕರು, ಸಶಸ್ತ್ರ ಪಡೆಗಳು, ಕೇಂದ್ರ ಸಶಸ್ತ್ರ ಪೆÇಲೀಸ್ ಪಡೆಗಳು, ಸಾರ್ವಜನಿಕ ವಲಯದ ಉದ್ಯಮಗಳು, ಖಾಸಗಿ ಕಂಪನಿಗಳು ಮತ್ತು ಡ್ರೋನ್ ಸ್ಟಾರ್ಟ್‍ಅಪ್‍ಗಳು ಸೇರಿದಂತೆ 1600ಕ್ಕೂ ಹೆಚ್ಚು ಪ್ರತಿನಿಧಿಗಳು ಉತ್ಸವದಲ್ಲಿ ಭಾಗವಹಿಸಲಿದ್ದಾರೆ.

