ನಾಗಪುರ: ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಮೂಲಕ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ದಿನಕ್ಕೊಂದು ಮಸೀದಿ ವಿವಾದ ಸೃಷ್ಟಿಸಬೇಕಾಗಿಲ್ಲ, ಕಾಶಿ ಜ್ಞಾನವಾಪಿ ಸೇರಿದಂತೆ ದೇಶದ ವಿವಿಧ ಮಸೀದಿಗಳ ಕುರಿತು ವಿವಾದ ಎದ್ದಿರುವ ನಡುವೆಯೇ ಮೋಹನ್ ಭಾಗವತ್ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ.
ಆರ್‍ಎಸ್‍ಎಸ್ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಮುಸ್ಲಿಮರೇನು ಹೊರಗಿನವರಲ್ಲ. ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಪೂರ್ವದಲ್ಲಿ ಅವರು ಹಿಂದೂಗಳೇ ಆಗಿದ್ದರು ಎಂದು ಹೇಳಿದ್ದಾರೆ.
ಜ್ಞಾನವಾಪಿ ಮಸೀದಿ ವಿಚಾರವನ್ನು ಪ್ರಸ್ತಾಪಿಸಿದ ಅವರು, ಹಿಂದೂ ಹಾಗೂ ಮುಸ್ಲಿಮರು ಮಾತುಕತೆ ಮೂಲಕ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಆದರೆ ಇದು ಎಲ್ಲ ಸಮಯದಲ್ಲೂ ಸಾಧ್ಯವಾಗಲಾರದು. ಹೀಗಾಗಿ ಏನೇ ತೀರ್ಪು ಬಂದರೂ ಸ್ವೀಕಾರ ಮಾಡಬೇಕು ಎಂದು ತಿಳಿಸಿದರು.
ಇತಿಹಾಸವನ್ನು ನಾವು ರಚನೆ ಮಾಡಿಲ್ಲ. ಇಂದಿನ ಹಿಂದೂ-ಮುಸ್ಲಿಮರೂ ರಚಿಸಿಲ್ಲ. ಭಾರತದ ಮೇಲೆ ಇಸ್ಲಾಂ ರಾಜರು ದಂಡಯಾತ್ರೆ ಕೈಗೊಂಡಾಗ ಜ್ಞಾನವಾಪಿಯಂತಹ ಘಟನೆಗಳು ನಡೆದಿವೆ. ನೂರಾರು ದೇವಸ್ಥಾನಗಳು ನಾಶವಾಗಿವೆ. ಹೀಗಾಗಿ ದಿನಕ್ಕೊಂದು ಹೊಸ ವಿವಾದವನ್ನು ಯಾಕೆ ಸೃಷ್ಟಿ ಮಾಡಬೇಕು ಎಂದು ಪ್ರಶ್ನಿಸಿದರು.
ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಆರ್‍ಎಸ್‍ಎಸ್ ಪಾಲ್ಗೊಂಡಿತ್ತು ನಿಜ. ಕೆಲ ಐತಿಹಾಸಿಕ ಕಾರಣ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ನಾವು ಭಾಗಿಯಾಗಿದ್ದು ನಿಜ. ಆದರೆ ಇನ್ನು ಮುಂದೆ ಈ ರೀತಿಯ ಹೋರಾಟದಲ್ಲಿ ಭಾಗಿಯಾಗುವುದಿಲ್ಲ ಎಂದು ಈ ಹಿಂದೆಯೇ ಹೇಳಿದ್ದೆವು. ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

