ಬಸ್ ಅಪಘಾತ: ಬೆಂಕಿ ತಗುಲಿ ಏಳು ಮಂದಿ ದುರ್ಮರಣ

ಕಲಬುರಗಿ: ಖಾಸಗಿ ಬಸ್ ನಿಯಂತ್ರಣ ತಪ್ಪಿ ಟೆಂಪೋ ಟ್ರಾವೆಲ್ ವಾಹನಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು ಏಳು ಮಂದಿ ಸಜೀವ ದಹನವಾಗಿ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಮೃತರು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿರುವುದರಿಂದ ಅವರ ವಿವರ ಸದ್ಯಕ್ಕೆ ಲಭ್ಯವಾಗಿಲ್ಲ.

12 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

35 ಪ್ರಯಾಣಿಕರಿದ್ದ ಬಸ್ ಗೋವಾದಿಂದ ಕಲಬುರಗಿ ಮಾರ್ಗವಾಗಿ ಹೈದರಾಬಾದ್‍ಗೆ ಹೋಗುತ್ತಿದ್ದಾಗ ಕಮಲಾಪುರದ ಬಳಿ ಶುಕ್ರವಾರ ಮುಂಜಾನೆ 6.30ರ ವೇಳೆ ಈ ದುರ್ಘಟನೆ ನಡೆದಿದೆ.

ವೇಗವಾಗಿ ಚಲಿಸಿದ ಬಸ್ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಟೆಂಪೋ ಟ್ರಾವೆಲ್ ವಾಹನಕ್ಕೆ ಡಿಕ್ಕಿ ಹೊಡೆದು ತಗ್ಗು ಪ್ರದೇಶಕ್ಕೆ ಉರುಳಿಬಿದ್ದಿದೆ.

ಈ ಸಂದರ್ಭದಲ್ಲಿ ಡೀಸೆಲ್ ಟ್ಯಾಂಕರ್ ಒಡೆದು ಬೆಂಕಿ ಹೊತ್ತಿಕೊಂಡು ಬಸ್ ಪೂರ್ತಿ ಆವರಿಸಿಕೊಂಡಿದೆ.

ಸ್ಥಳಕ್ಕೆ ಎಸ್‍ಪಿ ಇಶಾಪಂಥ್, ಹೆಚ್ಚುವರಿ ಎಸ್‍ಪಿ ಪ್ರಸನ್ನ ದೇಸಾಯಿ ಆಗಮಿಸಿ ಪರಿಶೀಲಿಸಿದರು. ಅಗ್ನಿಶಾಮಕ ದಳದವರ ರಕ್ಷಣಾ ಕಾರ್ಯ ಮಾಡಿದರು.