ಪರಿಷ್ಕೃತ ಪಠ್ಯವನ್ನು ಕಸದ ಬುಟ್ಟಿಗೆ ಎಸೆಯಿರಿ – ಸಿದ್ದು ಕಿಡಿ

ಬೆಂಗಳೂರು: ವಿಕೃತ ಮನಸ್ಸಿನ ಕಿಡಿಗೇಡಿ ಅಧ್ಯಕ್ಷ ತಯಾರಿಸಿರುವ ಪರಿಷ್ಕೃತ ಪಠ್ಯದಿಂದ ಬಹುಸಂಖ್ಯಾತ ಹಿಂದೂಗಳ ಮನಸ್ಸಿಗೆ ಹಾಗೂ ಆರುವರೆ ಕೋಟಿ ಕನ್ನಡಿಗರ ಮನಸ್ಸಿಗೆ ಘಾಸಿಯಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಕನ್ನಡಿಗರ ಸಹನೆಯನ್ನು ಪರೀಕ್ಷಿಸಲು ಹೋಗಬೇಡಿ, ಮೊದಲು ಈ ಪರಿಷ್ಕೃತ ಪಠ್ಯವನ್ನು ಕಸದ ಬುಟ್ಟಿಗೆ ಎಸೆಯಿರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಿಂದೂ ಭಾವನೆಗೆ ಧಕ್ಕೆಯಾಗಿದ್ದಕ್ಕೆ ಪಠ್ಯಪರಿಷ್ಕರಣೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೂಗಳು ಯಾರು ಎಂಬುದನ್ನು ಸಚಿವರು ಬಹಿರಂಗ ಪಡಿಸಲಿ ಎಂದಿದ್ದಾರೆ.

ಯಾವುದರಿಂದ ಯಾರ ಭಾವನೆಗೆ ಧಕ್ಕೆಯಾಗಿದೆ ಎನ್ನುವುದನ್ನು ಸಚಿವರು ಸ್ಪಷ್ಟಪಡಿಸಬೇಕು ಎಂದು ಸಿದ್ದು ಒತ್ತಾಯಿಸಿದ್ದಾರೆ.

ಪರಿಷ್ಕೃತ ಪಠ್ಯದಲ್ಲಿ ಬಸವಣ್ಣ, ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ, ನಾರಾಯಣ ಗುರು, ಕುವೆಂಪು ಸೇರಿದಂತೆ ಹಲವಾರು ಮಹನೀಯರ ವ್ಯಕ್ತಿತ್ವವನ್ನು ಕಡೆಗಣಿಸಲಾಗಿದೆ.

ಮಹಾನ್ ನಾಯಕರನ್ನು ಪರಿಷ್ಕೃತ ಸಮಿತಿಯ ಕಿಡಿಗೇಡಿ ಅಧ್ಯಕ್ಷ ತುಚ್ಛೀಕರಿಸಿದ್ದಾರೆ ಎಂದು ಪ್ರತಿಭಟಿಸುತ್ತಿರುವವರು ಅನ್ಯಧರ್ಮೀಯರಲ್ಲ, ಹಿಂದೂಗಳೇ ಅಲ್ಲವೇ  ಎಂದು ಶಿಕ್ಷಣ ಸಚಿವರನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪಠ್ಯ ಪರಿಷ್ಕರಣಾ ಸಮಿತಿಯಲ್ಲಿ ದಲಿತ ಮತ್ತು ಹಿಂದುಳಿದ ಜಾತಿಗಳ ವಿದ್ವಾಂಸರಿಗೆ ಪ್ರಾತಿನಿಧ್ಯವೇ ನೀಡಿಲ್ಲ. ಶಿಕ್ಷಣ ಸಚಿವರು ಕಾಳಜಿ ತೋರುತ್ತಿರುವ ಹಿಂದೂಗಳ ವ್ಯಾಖ್ಯಾನದಲ್ಲಿ ಈ ಸಮುದಾಯಗಳು ಸೇರಿಕೊಳ್ಳುವುದಿಲ್ಲವೇ ಎಂದು ಟೀಕಿಸಿದ್ದಾರೆ

ಬಸವಣ್ಣ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತ್ಯಜಿಸಿದವರು ಎನ್ನುವ ಕಾರಣಕ್ಕೆ ಅವರನ್ನು ನಿರ್ಲಕ್ಷಿಸಲಾಯಿತೇ ಅಥವಾ ಅವಮಾನ ಮಾಡಲಾಯಿತೇ ಎಂದು ಸಿದ್ದು ಖಾರವಾಗಿ ಪ್ರಶ್ನಿಸಿದ್ದಾರೆ.