ಆರ್ ಎಸ್ ಎಸ್ ಬಗ್ಗೆ  ಕಾಂಗ್ರೆಸ್ ಅಪಪ್ರಚಾರ : ಬೊಮ್ಮಾಯಿ ಆಕ್ರೋಶ

ಹುಬ್ಬಳ್ಳಿ: ಆರ್ ಎಸ್ ಎಸ್ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಆದರೆ ಜನರಿಗೆ ಆ ಸಂಘಟನೆಯ ಬಗ್ಗೆ ಎಲ್ಲವೂ ತಿಳಿದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,ಆರ್ ಎಸ್ ಎಸ್ ಸಂಘಟನೆ 75 ವರ್ಷಗಳಿಂದ ದೇಶಭಕ್ತಿ ಹಾಗೂ ಜನರ ಸೇವೆಯಲ್ಲಿ ತೊಡಗಿದೆ ಎಂದು ತಿಳಿಸಿದರು.

ಹಲವು ಸಂದರ್ಭಗಳಲ್ಲಿ ಅನಾಹುತಗಳಾದಾಗ ಜನರ ಸಂಕಷ್ಟಕ್ಕೆ ಸ್ಪಂದಿಸಲು ಆರ್ ಎಸ್ ಎಸ್ ನಿಂತಿದೆ,ವಿವಿಧ ರಾಜ್ಯಗಳಲ್ಲಿ ಆರ್ ಎಸ್ ಎಸ್ ಉತ್ತಮವಾಗಿ ಕೆಲಸ ಮಾಡಿದೆ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಆರ್ ಎಸ್ ಎಸ್ ವಿರೋಧಿಗಳು.  ಅವರ ಇಂತಹ ಧೋರಣೆಯಿಂದಲೇ ಎಲ್ಲಾ ರಾಜ್ಯಗಳಲ್ಲಿ  ಅಧಿಕಾರ ಕಳೆದುಕೊಂಡಿದೆ, ಕರ್ನಾಟಕದಲ್ಲಿಯೂ ಹೀಗೆಯೇ ಆಗಲಿದೆ ಎಂದು ಬೊಮ್ಮಾಯಿ ಭವಿಷ್ಯ ನುಡಿದರು.

ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿಯೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ, ಶಿಕ್ಷಣ ಸಚಿವರು ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದು ‌ಸಿಎಂ ತಿಳಿಸಿದರು.