ಮೈಸೂರು: ಬಿಜೆಪಿ ಗೆಲ್ಲಬಾರದು ಎಂಬ ಉದ್ದೇಶ ಕುಮಾರಸ್ವಾಮಿಗೆ ಇದ್ದರೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ನಿವೃತ್ತಿಗೊಳಿಸಿ ನಮಗೆ ಬೆಂಬಲಿಸಲಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,
ನಮ್ಮದು ಜಾತ್ಯಾತೀತ ಪಕ್ಷ. ದೇವೇಗೌಡರು ರಾಜ್ಯ ಸಭೆಗೆ ಸ್ಪರ್ಧೆ ಮಾಡಿದ್ದಾಗ ನಾವು ಅಭ್ಯರ್ಥಿ ಹಾಕಿದ್ದೆವಾ, ದೇವೇಗೌಡರು ಗೆದ್ದು ಬರಲಿ, ಬಿಜೆಪಿ ಗೆಲ್ಲಬಾರದು ಎಂದು ಹಾಕಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ನ 37 ಜನ ಶಾಸಕರಿದ್ದರೂ ನಾವು ಕುಮಾರಸ್ವಾಮಿಗೆ ಬೆಂಬಲ ನೀಡಲಿಲ್ವಾ ಎಂದು ಪ್ರಶ್ನಿಸಿದರು.
ಬಿಜೆಪಿ ಬರಬಾರದು ಎಂದು ಹೀಗೆ ಮಾಡಿದ್ದೆವು, ಕಾಂಗ್ರೆಸ್ ಬೆಂಬಲಿಸದೆ ಹೋಗಿದ್ದರೆ ದೇವೇಗೌಡರು ಪ್ರಧಾನಿಯಾಗುತ್ತಿದ್ದರಾ, ಕೋಮುವಾದಿ ಪಕ್ಷ ಗೆಲ್ಲಬಾರದೆಂದರೆ ಜೆಡಿಎಸ್ ನವರು ಬೆಂಬಲ ನೀಡುತ್ತಾರೆ ಎಂದರು.
ಇಬ್ರಾಹಿಂಗೆ ಮಾನ, ಮರ್ಯಾದಿ ಇಲ್ಲ.ಜೆಡಿಎಸ್ ನವರು ಪರಿಷತ್ ಸದಸ್ಯನಾಗಿ ಮಾಡುತ್ತೇನೆ ಅಂದಿದ್ದರು, ಮಾಡಿದ್ದಾರಾ? ಇಬ್ರಾಹಿಂ ನಾಮಕಾವಸ್ತೆಗೆ ಪಕ್ಷದ ಅಧ್ಯಕ್ಷ ಅಷ್ಟೇ. ಕೂತ್ಕೊ ಅಂದರೆ ಕೂತ್ಕೋಬೇಕು, ನಿಂತ್ಕೊ ಅಂದರೆ ನಿಂತ್ಕೊಬೇಕು ಅಂತಹ ಸ್ಥಿತಿ ಅವರದ್ದು ಎಂದು ಸಿದ್ದು ಟೀಕಿಸಿದರು.
ಮೊದಲೆಲ್ಲಾ ಸಿದ್ದರಾಮಯ್ಯ ತಮ್ಮ ಪಕ್ಷದ ಶಾಸಕರನ್ನು ಬಿಜೆಪಿಗೆ ಕಳಿಸಿದ್ದಕ್ಕೆ ಸರ್ಕಾರ ಬಿದ್ದೋಯ್ತು ಎನ್ನುತ್ತಿದ್ದ ಕುಮಾರಸ್ವಾಮಿ, ಈಗ ಸರ್ಕಾರ ಬಿದ್ದೋಗಲಿ ಎಂದೇ ವಿದೇಶಕ್ಕೆ ಹೋಗಿದ್ದೆ ಎನ್ನುತ್ತಿದ್ದಾರೆ. ಇವೆರಡರಲ್ಲಿ ಯಾವುದು ಸತ್ಯ ಎಂದು ಪ್ರಶ್ನಿಸಿದರು.
ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಇದೇ ವೇಳೆ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಬಳಿ 25 ಹೆಚ್ಚುವರಿ ಮತಗಳಿವೆ, ಎರಡನೇ ಪ್ರಾಶಸ್ತ್ಯದ ಮತಗಳು ನಮಗೆ ಬೀಳುತ್ತವೆ, ಜೆಡಿಎಸ್ ಮತ್ತು ಬಿಜೆಪಿಯವರು ಆತ್ಮಸಾಕ್ಷಿಗೆ ಅನುಗುಣವಾಗಿ ನಮಗೆ ಮತ ಹಾಕುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾವು ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವುದರಿಂದ ಜೆಡಿಎಸ್ ಪಕ್ಷದ ಮತಗಳು ನಮಗೆ ಸಿಗುತ್ತವೆ ಎಂಬ ನಂಬಿಕೆಯಿದೆ ಎಂದು ಸಿದ್ದು ಹೇಳಿದರು.
ಕಾಂಗ್ರೆಸ್ ದಲಿತರು ಮತ್ತು ಸಂವಿಧಾನಕ್ಕೆ ಬದ್ಧತೆ ಇರುವ ಪಕ್ಷ, ನಮ್ಮ ಆಡಳಿತದ ಕಾಲದಲ್ಲೇ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡಬೇಕು ಎಂದು ಕಾನೂನು ತಂದಿದ್ದು.
ಸರ್ಕಾರಿ ಟೆಂಡರ್ ಗಳಲ್ಲಿ ಮೀಸಲಾತಿ ತಂದಿದ್ದು, ಬಡ್ತಿ ಮೀಸಲಾತಿಯನ್ನು ಉಳಿಸಿದ್ದೇ ನಾವು. ನಮಗೆ ದಲಿತರ ಕಾಳಜಿ ಬಗ್ಗೆ ಯಾರು ಹೇಳಿಕೊಡೋದು ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹಿಂದೂಗಳ ಭಾವನೆಗೆ ಧಕ್ಕೆ ಆಗಿದ್ದಕ್ಕೆ ಪರಿಷ್ಕರಣೆ ಮಾಡಿದ್ದೇವೆ ಎಂದಿರುವ ಬಿಜೆಪಿಗರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಂಬೇಡ್ಕರ್ ಹಿಂದೂ ಅಲ್ಲವೇ ಸಂವಿಧಾನ ಶಿಲ್ಪಿ ಎಂಬ ಪದವನ್ನೇ ತೆಗೆದು ಹಾಕಿದ್ದಾರೆ.
ಕುವೆಂಪು, ಬಸವಣ್ಣ, ನಾರಾಯಣ ಗುರು, ಭಗತ್ ಸಿಂಗ್ ಪಠ್ಯವನ್ನು ತೆಗೆದು ಹಾಕಿದ್ದಾರೆ, ಇವರೆಲ್ಲ ಹಿಂದೂ ಅಲ್ಲವಾ, ಇವರೆಲ್ಲ ಹಿಂದೂಗಳಿಗೆ ವಿರುದ್ಧವಾಗಿ ಬರೆದಿದ್ದಾರಾ ಎಂದು ತರಾಟೆಗೆ ತೆಗೆದುಕೊಂಡರು.
ಸಿದ್ದರಾಮಯ್ಯ ಅರ್ಥಶಾಸ್ತ್ರಜ್ಞರಾ ಎಂದಿದ್ದ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದು, ಪ್ರತಾಪ್ ಸಿಂಹ ವಕೀಲರಾ, ಅರ್ಥ ಶಾಸ್ತ್ರಜ್ಞರಾ ಎಂದು ಕಿಡಿಕಾರಿದರು.
ಪ್ರತಾಪ್ ಸಿಂಹ ಅರ್ಥಶಾಸ್ತ್ರಜ್ಞ ಆಗಿದ್ದರೆ ತಾನೇ ತಾನು ಹೇಳ್ತಿರೋದು ಸರಿ ಅಥವಾ ತಪ್ಪು ಎಂದು ಗೊತ್ತಾಗೋದು. ಅವರಿಗೆ ಅರ್ಥಶಾಸ್ತ್ರದ ಜ್ಞಾನ ಇಲ್ಲದೆ ನಾನು ಮಾಡಿದ್ದು ತಪ್ಪು ಎಂದು ಹೇಗೆ ಹೇಳ್ತಾರೆ ಎಂದು ಪ್ರಶ್ನಿಸಿದರು.
ನಾನು ಲಕ್ಷ್ಮಣ್ ಅವರನ್ನು ಕಳಿಸ್ತೀನಿ, ಪ್ರತಾಪ್ ಸಿಂಹ ಅವರು ಒಂದೇ ವೇದಿಕೆಯಲ್ಲಿ ಲಕ್ಷ್ಮಣ್ ಜೊತೆ ವಾದ ಮಾಡಲಿ. ಯಾರು ಸರಿ, ಯಾರು ತಪ್ಪು ಗೊತ್ತಾಗುತ್ತೆ. ಪ್ರತಾಪ್ ಸಿಂಹ ಮೈಸೂರಿಗಾಗಿ ಏನು ಮಾಡಿದ್ದಾರೆ, ನಾನೇನು ಮಾಡಿದ್ದೀನಿ ಚರ್ಚೆ ಮಾಡಲಿ ಎಂದು ಸಿದ್ದು ಸವಾಲು ಹಾಕಿದರು.

