ಮೈಸೂರು: ಬಿಜೆಪಿ ದಲಿತ, ಅಂಬೇಡ್ಕರ್, ಸಂವಿಧಾನ ವಿರೋಧಿ ಎಂದು ಕಾಂಗ್ರೆಸ್ ಮಾಡುತ್ತಿದ್ದ ಪ್ರಚಾರವೆಲ್ಲಾ ಸುಳ್ಳು ಎಂದು ದಲಿತ ಸಮುದಾಯಕ್ಕೆ ಸ್ಪಷ್ಟವಾಗಿ ಅರಿವಾಗಿದೆ. ಹಾಗಾಗಿ ಬಿಜೆಪಿ ಬಗ್ಗೆ ದಲಿತರಿಗೆ ಇದ್ದ ಆತಂಕ ನಿವಾರಣೆಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಸೋಮವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು,ಬಿಜೆಪಿ ಯವರು ಸಂವಿಧಾನ ಬದಲಾಯಿಸುತ್ತಾರೆ, ಮೀಸಲಾತಿ ತೆಗೆದು ಬಿಡುತ್ತಾರೆ.ಅವರು ಅಂಬೇಡ್ಕರ್ ವಿರೋಧಿಗಳು ಎಂದು ಕಾಂಗ್ರೆಸ್ ನವರು ಅಪಪ್ರಚಾರ ಮಾಡುತ್ತಿದ್ದರು. ಇದರಿಂದ ದಲಿತ ಸಮುದಾಯ ಆತಂಕಗೊಂಡಿತ್ತು ಎಂದು ಹೇಳಿದರು.
ನರೇಂದ್ರ ಮೋದಿ ಅವರು ನಾನು ಪ್ರಧಾನ ಮಂತ್ರಿಯಾಗಿದ್ದೇ ಅಂಬೇಡ್ಕರ್ ಅವರ ಸಂವಿಧಾನ ದಿಂದ ಎಂದು ಸ್ಪಷ್ಟವಾಗಿ ಹೇಳಿದರಲ್ಲದೆ, ಸಂವಿಧಾನದ ಬದಲಾವಣೆ ಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಅಲ್ಲದೇ ಅಂಬೇಡ್ಕರ್ ರ ಪಂಚಶೀಲ ಸ್ಥಳಗಳನ್ನು ಅಭಿವೃದ್ಧಿ ಪಡಿಸಿದರು. ರಾಜ್ಯದಲ್ಲಿ ಕೂಡಾ ಅಂಬೇಡ್ಕರ್ ಪಾದಸ್ಪರ್ಶ ಮಾಡಿದ ಏಳು ಜಿಲ್ಲೆಗಳಲ್ಲಿನ ಸ್ಥಳಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.
ದಲಿತ ಸಮುದಾಯವನ್ನು ಅಭಿವೃದ್ಧಿಯ ಪಥದತ್ತ ತರಲು ಅನೇಕ ಯೋಜನೆ ಗಳನ್ನು ನಮ್ಮ ಸರ್ಕಾರ ಜಾರಿಗೊಳಿಸಿದೆ.
ನನ್ನನ್ನು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷನಾಗಿ ಮಾಡಿರುವುದಲ್ಲದೆ, ವಿಧಾನಪರಿಷತ್ ಸದಸ್ಯನಾಗಿ ಮಾಡಿ, ಗೌರವಯುತವಾಗಿ ನಡೆಸಿಕೊಳ್ಳುತ್ತಿದೆ.
ದಲಿತರಿಗೆ ಹೆಚ್ಚಿನ ಗೌರವಗಳನ್ನು ಬಿಜೆಪಿ ನೀಡುತ್ತಿದೆ. ಈ ಎಲ್ಲಾ ಕಾರಣಗಳಿಂದ ಬಿಜೆಪಿ ಯವರ ಬಗ್ಗೆ ಕಾಂಗ್ರೆಸ್ ನಾಯಕರು ಮಾಡುತ್ತಿದ್ದ ಆರೋಪಗಳೆಲ್ಲ ಸುಳ್ಳು ಎಂಬುದು ದಲಿತ ಸಮುದಾಯಕ್ಕೆ ಮನವರಿಕೆಯಾಗಿದೆ ಎಂದು ನಾರಾಯಣ ಸ್ವಾಮಿ ತಿಳಿಸಿದರು.
ಕಾಂಗ್ರೆಸ್ ಬೆಂಬಲಿಸಿದರೆ ದಲಿತರನ್ನು ಸಿಎಂ ಮಾಡುವುದಾಗಿ ಹೇಳಿದ್ದರು. ಆದರೆ ಸಿದ್ದರಾಮಯ್ಯ ಜಿ.ಎಂ.ಪರಮೇಶ್ವರ ಅವರನ್ನು ಸೋಲಿಸಿ ಸಿಎಂ ಸ್ಥಾನ ತಪ್ಪಿಸಿದರು. ಈಗ ನಾನು ಸಿಎಂ ಆಗಬೇಕು ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪೈಪೋಟಿ ನಡೆಸುತ್ತಿದ್ದಾರೆ.
ಹಾಗಾಗಿ ಕಾಂಗ್ರೆಸ್ ನಿಂದ ದಲಿತರಿಗೆ ಸಿಎಂ ಸ್ಥಾನ ಸಿಗುವುದಿಲ್ಲ ಎಂಬುದು ದಲಿತರಿಗೆ ಖಚಿತವಾಗಿದೆ. ಸಿದ್ದರಾಮಯ್ಯ ರಷ್ಟು ದಲಿತ ವಿರೋಧಿ ಬೇರೆ ಯಾರೂ ಇಲ್ಲ ಎಂದು ಮನವರಿಕೆಯಾಗಿದೆ. ಹಾಗಾಗಿ ನಮ್ಮ ಸಮುದಾಯದ ಅನೇಕ ಸಂಘಟನೆಗಳು ಬಿಜೆಪಿಗೆ ಬೆಂಬಲ ನೀಡುತ್ತಿವೆ ಎಂದು ತಿಳಿಸಿದರು.
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಬಿಜೆಪಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಪಕ್ಷದ ಅಭ್ಯರ್ಥಿಯಾದ ಮೈ.ವಿ.ರವಿಶಂಕರ್ ಅವರು ಮೊದಲ ಪ್ರಾಶಸ್ತ್ಯ ಮತಗಳಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ನಾರಾಯಣ ಸ್ವಾಮಿವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿ ಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಎನ್.ನಂಜುಂಡ ಸ್ವಾಮಿ, ಎಂ.ಎಸ್.ಪರಮಾನಂದ, ಎಸ್.ಮಹದೇವಯ್ಯ, ಟಿ.ಎಸ್.ಶ್ರೀವತ್ಸ, ಸೋಮಸುಂದರ್, ಎಂ.ಎ.ಮೋಹನ್, ಕೇಬಲ್ ಮಹೇಶ್, ಮಹೇಶ್ ರಾಜೇ ಅರಸ್, ಪ್ರದೀಪ್ ಕುಮಾರ್, ಜೋಗಿ ಮಂಜು, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.

