ಮಂಕಿಪಾಕ್ಸ್ ತಡೆಗೆ ರಾಜ್ಯದಲ್ಲೂ ಮುನ್ನೆಚ್ಚರಿಕೆ ಕ್ರಮ -ಸುಧಾಕರ್

ಬೆಂಗಳೂರು: ಹಲವು ದೇಶಗಳಲ್ಲಿ ಮಂಕಿಪಾಕ್ಸ್ ಸೋಂಕು ಹೆಚ್ಚಾಗುತ್ತಿರುವುದರಿಂದ ನಮ್ಮರಾಜ್ಯದಲ್ಲೂ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ರೋಗದ ಮುನ್ಸೂಚನೆ ಕಂಡು ಬಂದ ಕೂಡಲೇ ಸ್ಕ್ರೀನಿಂಗ್ ಮಾಡಲು ಸೂಚಿಸಲಾಗಿದೆ. ಎಲ್ಲಾ ಜಿಲ್ಲೆಗಳ ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸಲಾಗುವುದು ಎಂದು ಸಚಿವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಸೇರಿದಂತೆ ಹಲವಾರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಆರೋಗ್ಯ ಇಲಾಖೆಯು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಸುತ್ತೋಲೆ ಹೊರಡಿಸಿ ರಾಜ್ಯದಲ್ಲಿ ಕಣ್ಗಾವಲು ಚಟುವಟಿಕೆಗಳನ್ನು ತೀವ್ರಗೊಳಿಸಲು ನಿರ್ದೇಶನ ನೀಡಿದೆ.

ಶಂಕಿತ ಪ್ರಕರಣ ಕಂಡುಬಂದಾಗ ಅಂತಹ ರೋಗಿಯನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಯಲ್ಲಿ ಎರಡು ಹಾಸಿಗೆ ಮೀಸಲಿಡಲು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಲಾಗಿದೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಡಿಎಸ್ಒಗಳು ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿಯೊಂದಿಗೆ ಸಮನ್ವಯ ಸಾಧಿಸಿ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ನಡೆಸುವಂತೆ  ಆದೇಶಿಸಲಾಗಿದೆ‌ ಎಂದು ಹೇಳಿದ್ದಾರೆ.

ಶಂಕಿತ ಪ್ರಕರಣಗಳ ಮಾದರಿ ಸಂಗ್ರಹಿಸಿ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ನೇರವಾಗಿ ಅಥವಾ ಎನ್ ಐವಿ ಮೂಲಕ ಕಳುಹಿಸಲು ಸೂಚಿಸಲಾಗಿದೆ.

ಈ ಸಂಬಂಧ  ರಾಜ್ಯದ ಕಣ್ಗಾವಲು ಅಧಿಕಾರಿ ಹಾಗೂ ಯೋಜನಾ ನಿರ್ದೇಶಕ ಡಾ.ಶ್ರೀನಿವಾಸ ಅವರನ್ನು ರಾಜ್ಯ ಮಟ್ಟದ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಸುಧಾಕರ್ ತಿಳಿಸಿದ್ದಾರೆ.