ಮೇಕದಾಟು ಯೋಜನೆ ತಡೆಗೆ ತಮಿಳುನಾಡು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿರುವುದು ಸಮ್ಮತವಲ್ಲ ಸಿಎಂ

ಮೈಸೂರು: ಕರ್ನಾಟಕದ ಮೇಕದಾಟು ಯೋಜನೆ ತಡೆಗಾಗಿ ಸುಪ್ರೀಂಕೋರ್ಟ್ ಗೆ ತಮಿಳುನಾಡು ಅರ್ಜಿ ಸಲ್ಲಿಸಿರುವುದು ಸಮ್ಮತವಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮೈಸೂರಲ್ಲಿ ಬುಧವಾರ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಮೇಕದಾಟು ಯೋಜನೆ ತಡೆ ಹಿಡಿಯುವ ಸುಪ್ರೀಂಕೋರ್ಟ್ ಗೆ ತಮಿಳುನಾಡು ಅರ್ಜಿ ಹಾಕಿದೆ. ಇದು ನ್ಯಾಯ ಸಮ್ಮತವಲ್ಲ. ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿರುವುದು ಸರಿಯಾದ ಕ್ರಮವೂ ಅಲ್ಲ. ಸುಪ್ರೀಂಕೋರ್ಟ್ ನಮಗೆ ನೋಟಿಸ್ ಕೊಟ್ಟಿದ್ದರು. ಅದಕ್ಕೆ ನಾವು ಸಮರ್ಥವಾದ ಉತ್ತರ ಕೊಟ್ಟಿದ್ದೇವೆ ಎಂದು ಸಿಎಂ ಹೇಳಿದರು.

ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಸುಪ್ರೀಂಕೋರ್ಟ್ ಆದೇಶದನ್ವಯ ರಚನೆಯಾಗಿದೆ. ಕಾವೇರಿ ನದಿಗೆ ಸಂಬಂಧಪಟ್ಟಂತೆ ಯಾವ ಯೋಜನೆ ಜಾರಿಗೊಳಿಸಬೇಕು, ಜಾರಿಗೊಳಿಸಬಾರದು ಎಂದು ತೀರ್ಮಾನ ಮಾಡುವ ಅಧಿಕಾರ ಪ್ರಾಧಿಕಾರಕ್ಕೆ ಮಾತ್ರ ಇದೆ. ಮೇಕೆದಾಟು ಯೋಜನೆ ಸಂಬಂಧ ಈಗಾಗಲೇ 16-17 ಸಭೆಗಳು ಆಗಿವೆ ಎಂದರು.

ರಾಜ್ಯಸಭಾ ಚುನಾವಣಾ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು ನಾವು ಯಾರಿಗೂ ಆಫರ್ ನೀಡಿಲ್ಲ. ಜೆಡಿಎಸ್- ಕಾಂಗ್ರೆಸ್ ಏನು ಮಾಡುತ್ತಾರೋ ಗೊತ್ತಿಲ್ಲ. ನಮಗೆ ಮೂರು ಸ್ಥಾನ ಗೆಲ್ಲಲು ಮತಗಳಿವೆ. ನಾವು ಈ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ತಿಳಿಸಿದರು.

ಲೊಕಾಯುಕ್ತ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀರ್ಘವೇ ಲೋಕಾಯುಕ್ತ ನೇಮಕವಾಗುತ್ತೆ. ಆ ವಿಚಾರದಲ್ಲಿ ಇನ್ನು ವಿಳಂಬವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮೈಸೂರಿಗಾಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ನೇರವಾಗಿ ಸಚ್ಛಿದಾನಂದ ಆಶ್ರಮಕ್ಕೆ ತೆರಳಿದರು.