ಬೆಂಗಳೂರು: ರಾಜ್ಯಸಭೆ ಚುನಾವಣಾ ಕಣದಿಂದ ನಮ್ಮ ಪಕ್ಷದ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ನವರು ಹೇಳಿದಕ್ಕೆಲ್ಲಾ ಒಪ್ಪಿಕೊಳ್ಳಬೇಕಾ ನಾವು 32 ಮಂದಿ ಶಾಸಕರಿದ್ದೇವೆ. ಕಾಂಗ್ರೆಸ್ ನವರು 25 ಶಾಸಕರಿದ್ದಾರೆ. ಯಾರ ಬಳಿ ಹೆಚ್ಚು ಮತಗಳು ಇವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇವರ ದಬ್ಬಾಳಿಕೆಗೆಲ್ಲಾ ನಾವು ಬಗ್ಗುವುದಿಲ್ಲ ಎಂದು ಹೇಳಿದರು.
ನಮ್ಮ ಅಭ್ಯರ್ಥಿ ಚುನಾವಣಾ ಕಣದಿಂದ ಯಾಕೆ ಹಿಂದೆ ಸರಿಯಬೇಕು, ನಾವೇನು ಸಂಧಾನ ಮಾಡುತ್ತಿಲ್ಲ. ನನ್ನ ಬಳಿ ಯಾರು ಸಂಧಾನಕ್ಕೆ ಬಂದಿದ್ದಾರೆ ಅನ್ನೋದನ್ನು ಕಾಂಗ್ರೆಸ್ ನವರು ಹೇಳಲಿ ಎಂದರು.
ನಾವು ಮೊದಲು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ನಮ್ಮ ಜೊತೆ ಸಮಾಲೋಚನೆ ಮಾಡಿ ಅಭ್ಯರ್ಥಿ ಹಾಕಿದ್ದಾರಾ ಬೆಂಬಲ ಕೊಡಿ ಅಂತಾ ನಮ್ಮ ಪಕ್ಷದ ಅಧ್ಯಕ್ಷರನ್ನು ಕೇಳಬಹುದಾಗಿತ್ತಲ್ಲ ಸಿ.ಎಂ.ಇಬ್ರಾಹಿಂ ಅವರಿಗೆ ಹಳೆಯ ಸ್ನೇಹಿತರಲ್ಲವೇ ಎಂದು ಎಚ್‌ಡಿ ಕೆ ಹೇಳಿದರು.
ಅಂತ ಯಾವ ಪ್ರಯತ್ನವನ್ನು ಮಾಡದೇ ಈಗ ಅಭ್ಯರ್ಥಿಯನ್ನು ವಾಪಸ್ ತೆಗೆದುಕೊಳ್ಳಲಿ ಅಂತಾ ಹೇಳುವುದು ಭಂಡತನ ಎಂದು ತಿಳಿಸಿದರು.
ನಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ಸಿದ್ದರಾಮಯ್ಯ ಅವರು ಕೇವಲವಾಗಿ ಮಾತನಾಡಿದ್ದಾರೆ. ಕಾಟಾಚಾರದ ಅಧ್ಯಕ್ಷರನ್ನು ಮಾಡಿದ್ದಾರೆಂದು ಕುಹಕವಾಡಿದ್ದಾರೆ. ಇದು ಅವರ ಸಣ್ಣತನ. ನಮ್ಮ ಅಧ್ಯಕ್ಷರ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ಕುಮಾರಸ್ವಾಮಿ ತಾಕೀತು ಮಾಡಿದರು.

