ಕೋಮುವಾದಿ ಪಕ್ಷವನ್ನು ಸೋಲಿಸಬೇಕೆಂಬ ಬದ್ದತೆ ಇದ್ದರೆ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಲಿ -ಸಿದ್ದು ಆಗ್ರಹ

ಬೆಂಗಳೂರು: ಕೋಮುವಾದಿ ಪಕ್ಷವನ್ನು ಸೋಲಿಸಬೇಕು ಎಂಬ ಬದ್ದತೆ ಇದ್ದರೆ ಜೆಡಿಎಸ್‍ನವರು ತಮ್ಮ ಅಭ್ಯರ್ಥಿಯನ್ನು ವಾಪಸು ಪಡೆದು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾಯನಾಡಿದ ಅವರು,ಪ್ರತಿಬಾರಿ ಕಾಂಗ್ರೆಸ್ ಪಕ್ಷವೇ ಏಕೆ ಬೆಂಬಲ ನೀಡಬೇಕು. ಜೆಡಿಎಸ್‍ನವರು ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಸಹಕರಿಸಲಿ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ನಂತರ ಒಂದು ದಿನ ತಡವಾಗಿ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಇದರ ಅರ್ಥವೇನು, ಬಿಜೆಪಿಯನ್ನು ಗೆಲ್ಲಿಸಲು ಸಹಕರಿಸುತ್ತಿದ್ದಾರೆ ಎಂದಲ್ಲವೆ ಎಂದು ಸಿದ್ದು ಪ್ರಶ್ನಿಸಿದರು.

ವಿಮಾನ ನಿಲ್ದಾಣದಲ್ಲಿ ನಾನು ಹುಬ್ಬಳ್ಳಿಯತ್ತ ಬರುತ್ತಿದ್ದೆ. ಯಡಿಯೂರಪ್ಪ ಅವರು ಬೆಳಗಾವಿಗೆ ಪ್ರಯಾಣಿಸಲು ಬಂದಿದ್ದರು. ಪರಸ್ಪರ ಭೇಟಿಯಾದೆವು. ಹಲೊ ಹಲೊ ಎಂದು ಮಾತನಾಡಿದ್ದೇವೆ. ಅದಕ್ಕೆಲ್ಲ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.