ಕ್ರಾಸ್ ವೋಟಿಂಗ್ ಮಾಡಿಸಿದರೂ ಕಾಂಗ್ರೆಸ್ ಗೆಲ್ಲಲ್ಲ -ಹೆಚ್.ಡಿ.ಕೆ

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಮಾಡಿಸಿದರೂ ಕಾಂಗ್ರೆಸ್  ಗೆಲ್ಲಲು ಸಾಧ್ಯವೇ ಇಲ್ಲ‌ ಎಂದು ಮಾಜಿ ಸಿಎಂ  ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ನಮಗೆ ಕ್ರಾಸ್ ವೋಟಿಂಗ್ ಆತಂಕವೂ ಇಲ್ಲ, ಭಯಾನೂ ಇಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ ನೀಡುವಂತೆ ಕೋರಿ ಜೆಡಿಎಸ್ ಶಾಸಕರಿಗೆ ಪತ್ರ ಬರೆದಿರುವುದು ನಾಚಿಕೆಗೇಡು ಎಂದು ಕಿಡಿಕಾರಿದರು.

ಅವರು ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಜೆಡಿಎಸ್ ಪಕ್ಷದ ಎರಡೂ ಕಣ್ಣು ಹೋಗಲಿ ಎಂಬಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಗೆಲ್ಲಲು ಅನುಕೂಲ ಮಾಡುತ್ತಿದ್ದಾರೆ. ಚುನಾವಣೆ ಮುಗಿಯಲಿ ಬಿಜೆಪಿ ಬಿ ಟೀಮ್ ಯಾವುದು ಎನ್ನುವುದು ಅರ್ಥ ಆಗುತ್ತದೆ ಎಂದು  ಹೇಳಿದರು.

ನಮ್ಮ ಪಕ್ಷದ 32 ಶಾಸಕರು ನಮ್ಮ ಜತೆಯಲ್ಲೇ ಇದ್ದಾರೆ.ಬೇರೆ ಪಕ್ಷದವರು ನನ್ನ ಸಂಪರ್ಕದಲ್ಲಿ ಯಾರು ಇಲ್ಲ. ನನ್ನ ಆತ್ಮೀಯರಾದ ಕೆಲ ಕಾಂಗ್ರೆಸ್ ಶಾಸಕರಿಗೆ ನಮಗೆ ಎರಡನೇ ಪ್ರಾಶಸ್ತ್ಯದ ಮತ ನೀಡಲು ಮನವಿ ಮಾಡಿದ್ದೇನೆ ಎಂದು ಎಚ್‌ಡಿ ಕೆ ಹೇಳಿದರು.

ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಟವೆಲ್ ಹಾಕಿದ್ದರು. ಆತ್ಮಸಾಕ್ಷಿ ಇದ್ದರೆ ಸತ್ಯ ಹೇಳಲಿ. ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಅಧಿಕಾರ ಸಿಗಲ್ಲ ಎಂದು ಬಿಜೆಪಿ ಸೇರುವುದಕ್ಕೆ ಎಲ್.ಕೆ.ಅಡ್ವಾಣಿ ಅವರೊಂದಿಗೆ ಚೌಕಾಸಿ ಮಾಡಿದ್ದರು. ಅದು ಸುಳ್ಳು ಎಂದು ಹೇಳಲಿ ಎಂದು ಸವಾಲು ಹಾಕಿದರು.

ಸಾಕಷ್ಟು ಒತ್ತಡ ಇದ್ದರೂ ರೈತರ ಸಾಲ ಮನ್ನಾ ಮಾಡಲು ನಾನು ಸುಮ್ಮನೆ ಇದ್ದೆ. ಎಲ್ಲವನ್ನೂ ಸಹಿಸಿಕೊಂಡಿದ್ದೆ. ನನ್ನ ಸರಕಾರವನ್ನು ತೆಗೆದು ಇಂಥ ಸರಕಾರ ಬರಲು  ಸಿದ್ದರಾಮಯ್ಯನವರೇ ಕಾರಣರು ಎಂದು ಕುಮಾರಸ್ವಾಮಿ ತಿಳಿಸಿದರು.