ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಸಮಾಜದ ಶಾಂತಿ ಕೆಡಿಸಿ,ದೇಶ ವಿದೇಶಗಳಲ್ಲಿ ರಾಜ್ಯದ ಗೌರವ ಹರಾಜು ಹಾಕುತ್ತಿರುವ ಬಸವರಾಜ ಬೊಮ್ಮಾಯಿ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ನಾಡಿನ ದಾರ್ಶನಿಕರು, ಮಹಾನ್ ಚೇತನಗಳಿಗೆ ಅಪಮಾನ ಮಾಡಿ, ಇತಿಹಾಸ ತಿರುಚಿರುವ ಪಠ್ಯಪುಸ್ತಕ ಪರಿಷ್ಕರಣೆ ರದ್ದುಗೊಳಿಸಿ ಹಿಂದಿನ ಪಠ್ಯಕ್ರಮ ಮುಂದುವರೆಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದ ವೇಳೆ ಮಾತನಾಡಿದರು.
ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ, ಬಿಜೆಪಿ ಸರ್ಕಾರ ಎಲ್ಲ ಸಮಾಜದ ಮಹನೀಯರಿಗೆ ಅಪಮಾನ ಮಾಡಿ, ರಾಜ್ಯದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಬಸವಣ್ಣನವರಿಂದ ಹಿಡಿದು ಅಂಬೇಡ್ಕರ್ ವರೆಗೂ, ನಾರಾಯಣ ಗುರುಗಳಿಂದ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರ ಸ್ವಾಮಿ, ಮುರುಘಾ ಮಠದ ಸ್ವಾಮಿಗಳು, ಭಗತ್ ಸಿಂಗ್ ವರೆಗೂ ಯಾರೊಬ್ಬರನ್ನೂ ಬಿಡದೆ ಈ ಸರ್ಕಾರ ಅಪಮಾನ ಮಾಡಿದೆ.
ನಾವೆಲ್ಲರೂ ಸಂವಿಧಾನದ ಆಶ್ರಯದಲ್ಲಿ ಬದುಕುತ್ತಿದ್ದು, ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಅಲ್ಲವೇ ಅಂಬೇಡ್ಕರ್ ಅವರನ್ನು ಮನೆ ದೇವರು ಎಂದು ಪರಿಗಣಿಸಿದ್ದು, ದೇಶದಾದ್ಯಂತ ಅವರ ಅತಿ ಹೆಚ್ಚು ಪುತ್ಥಳಿ ಇವೆ.
ನಮ್ಮ ಕಚೇರಿಗಳಲ್ಲಿ ಅವರ ಫೋಟೋ ಇಟ್ಟುಕೊಂಡು ಗೌರವಿಸುತ್ತೇವೆ. ಆದರೆ ಬಿಜೆಪಿ ಯವರು ಅಂಬೇಡ್ಕರ್ ಅವರಿಗೆ ಹೀಗೆ ಅಪಮಾನ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಬಸವಣ್ಣನವರ, ನಾರಾಯಣ ಗುರುಗಳ ಆಚಾರ, ವಿಚಾರ ಪ್ರಚಾರ ಮಾಡುವ ಸಂದರ್ಭದಲ್ಲಿ ಅಪಮಾನ ಮಾಡಲಾಗುತ್ತಿದೆ. ಬುದ್ಧ, ಜೈನರ ತ್ಯಾಗವನ್ನು ನಾವು ಸ್ಮರಿಸುತ್ತೇವೆ. ಈ ಎಲ್ಲರಿಗೂ ಅಪಮಾನ ಮಾಡಿ, ಅವರ ವಿಚಾರಕ್ಕೆ ತಿಲಾಂಜಲಿ ಹಾಕಲು ಪ್ರಯತ್ನಿಸಲಾಗಿದೆ.
ಜ್ಞಾನಪೀಠ ಪ್ರಶಸ್ತಿ ಪಡೆದ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆದ ಕುವೆಂಪು ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಡಿಕೆಶಿ ಆರೋಪಿಸಿದರು.
ಸರ್ಕಾರ ಮಾಡಲು ಸಾಧ್ಯವಾಗದ ಅನ್ನ, ಅಕ್ಷರ ಹಾಗೂ ಆಶ್ರಯ ದಾಸೋಹವನ್ನು ಮಾಡಿದ ಶಿವಕುಮಾರ ಸ್ವಾಮೀಜಿ ಅವರ ಹೆಸರು ಅಳಿಸಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ಎಲ್ಲಿವರೆಗೂ ತಗೆದುಕೊಂಡು ಹೋಗುತ್ತೀರಿ ಎಂಬ ಪ್ರಶ್ನೆಗೆ ಪ್ರತಿ ತಾಲೂಕು ಹಾಗೂ ಹಳ್ಳಿ ಹಳ್ಳಿಗೂ ತೆಗೆದುಕೊಂಡು ಹೋಗುತ್ತೇವೆ. ಈ ಹೋರಾಟದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

