ಬೆಂಗಳೂರು: ವಿಪ್ ನೀಡಿದ್ದರೂ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿಲ್ಲ ಶಾಸಕರಾದ ಶ್ರೀನಿವಾಸಗೌಡ ಹಾಗೂ ಶ್ರೀನಿವಾಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀನಿವಾಸ ಗೌಡರು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದ್ದು, ಅವರಿಗೆ ಮಾನ ಮರ್ಯಾದೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಜೆಡಿಎಸ್ ಕಾರ್ಯಕರ್ತರ ಬೆಂಬಲದಿಂದ ಗೆದ್ದವರು, ಶಾಸಕ ಸ್ಥಾನವನ್ನು ಉಳಿಸಿಕೊಳ್ಳಲು ಈ ರೀತಿಯ ನಡವಳಿಕೆ ತೋರುವ ಮೂಲಕ ಕೋಲಾರ ಜಿಲ್ಲೆಯ ಜನರಿಗೆ ಅವಮಾನ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಎಸ್. ಆರ್. ಶ್ರೀನಿವಾಸ್ ಯಾರಿಗೂ ಮತ ಹಾಕದೆ ಖಾಲಿ ಮತ ಪತ್ರ ಕೊಟ್ಟು ಹೋಗಿದ್ದಾರೆ. ಯಾಕೆ ಹೀಗೆ ನಾಟಕವಾಡಿದ್ದಾರೋ, ಮಾಧ್ಯಮದ ಮುಂದೆ ಜೆಡಿಎಸ್ ಗೆ ಮತ ಹಾಕಿದ್ದೇನೆ ಎಂದು ಹೇಳಿದ್ದಾರೆ ಇಂತವರಿಗೆ ಜನರೇ ಸರಿಯಾದ ಬುದ್ದಿ ಕಲಿಸುತ್ತಾರೆ ಎಂದು ಕಿಡಿಕಾರಿದರು.
ಪ್ರಜಾಪ್ರಭುತ್ವ ಉಳಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡುತ್ತಾರೆ. ಆದರೆ, ಇನ್ನೊಂದು ಪಕ್ಷದಲ್ಲಿ ಗೆದ್ದವರನ್ನು ಹೈಜಾಕ್ ಮಾಡುವ ಕೀಳು ಮಟ್ಟದ ರಾಜಕಾರಣ ಮಾಡುತ್ತಾರೆ ಎಂದು ಎಚ್ ಡಿ ಕೆ ಹರಿ ಹಾಯ್ದರು.
ಕಳೆದ ಬಾರಿ ರಾಜ್ಯಸಭೆ ಚುನಾವಣೆಯಲ್ಲಿ ಎಂಟು ಮಂದಿಯನ್ನು ಕ್ರಾಸ್ ಓಟ್ ಮಾಡಿಸಿದ್ದರು. ದೇಶದ ಸಂವಿಧಾನದ ಬಗ್ಗೆ ಕಾಂಗ್ರೆಸ್ ಗೆ ಗೌರವ ಇದೆಯೇ,
ಬಿಜೆಪಿ ಮಾಡಿದ ಕೆಲಸವನ್ನೇ ಇವರೂ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಗೆಲ್ಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರ ನಡವಳಿಕೆ ಇದೆ. ಶ್ರೀನಿವಾಸ ಗೌಡರ ಮತದಿಂದ ಕಾಂಗ್ರೆಸ್ ಗೆ ಏನು ಸಿಕ್ಕಿತು. ಬಿಜೆಪಿ ಗೆಲ್ಲಿಸಲು ಈ ಆಟ ತಾನೆ ನಾಡಿನ ಜನತೆ ಇದನ್ನೆಲ್ಲಾ ನೋಡುತ್ತಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

