ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಜಾಕ್ಕೆ ಸಿದ್ದು ಆಗ್ರಹ

ಬೆಂಗಳೂರು: ಬೇಜವಾಬ್ದಾರಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರನ್ನು ಮುಖ್ಯಮಂತ್ರಿಗಳು  ತಕ್ಷಣ ಸಂಪುಟದಿಂದ ವಜಾಮಾಡಬೇಕು ಹಾಗೂ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರನ್ನು ಬಂಧಿಸಬೇಕೆಂದು  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ರಾಜ್ಯದ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ ಕ್ಷೇತ್ರವನ್ನು ಕಲುಷಿತಗೊಳಿಸಿರುವ ಪಠ್ಯಪುಸ್ತಕ ಪರಿಷ್ಕರಣೆಯ ಅದ್ವಾನಕ್ಕೆ ಕಾರಣಕರ್ತರಾಗಿರುವ ಸಚಿವರನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಒಂದು ವೇಳೆ ಸಮರ್ಥನೆಗೆ ಮುಂದಾದರೆ ಮುಖ್ಯಮಂತ್ರಿಯವರೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆಗೆ ಅವಸರದಲ್ಲಿ ಮೌಖಿಕ ಸೂಚನೆ ನೀಡಿ ಘಟನೋತ್ತರ ಅನುಮತಿ ನೀಡಲು ಇದೇನು ಶೇ.40 ಕಮಿಷನ್ ಬಾಚುವ ರಸ್ತೆ ಕಾಮಗಾರಿಯೇ ಎಂದು ಸಿದ್ದು ಪ್ರಶ್ನಿಸಿದ್ದಾರೆ.

ಇಂತಹ ಮೌಖಿಕ ಸೂಚನೆಯಲ್ಲಿ ಕೆಲಸಮಾಡಿಸಿ ಅಮಾಯಕ ಗುತ್ತಿಗೆದಾರನನ್ನು ಬಲಿ ಪಡೆದಿರುವ ಈ ಸರ್ಕಾರ ಈಗ ಎಳೆಯ ಮಕ್ಕಳ ಭವಿಷ್ಯವನ್ನೇ ಬಲಿಕೊಡಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.

ಪಠ್ಯಪುಸ್ತಕ ಸಮಿತಿಯ ವಿಕೃತ ಅಧ್ಯಕ್ಷ ಮತ್ತು ಅವರ ಗ್ಯಾಂಗ್, ಜ್ಞಾನದೀವಿಗೆಗಳಾದ ಬಸವಣ್ಣ, ಅಂಬೇಡ್ಕರ್, ಜ್ಯೋತಿಬಾ ಪುಲೆ, ನಾರಾಯಣ ಗುರು, ಕೆಂಪೇಗೌಡ, ಕುವೆಂಪು,  ಮಹರ್ಷಿ ವಾಲ್ಮೀಕಿಯವರನ್ನೂ  ಅವಮಾನಿಸಿದೆ ಎಂದು ಸಿದ್ದರಾಮಯ್ಯ ‌ಟೀಕಿಸಿದ್ದಾರೆ.

ಇಂತಹ ಜ್ಞಾನವಿರೋಧಿ ಮತ್ತು ಮನುಷ್ಯವಿರೋಧಿ ಪಠ್ಯವನ್ನು ತರಗತಿಗಳಲ್ಲಿ ಬೋಧನೆಗೆ ಅವಕಾಶ ನೀಡಿದರೆ ಅದು ನಾಡಿಗೆ ಬಗೆವ ದ್ರೋಹವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇಷ್ಟೆಲ್ಲ ತಪರಾಕಿಗಳ ನಂತರವೂ ಮುಖ್ಯಮಂತ್ರಿಗಳು ಸಂಘ ಪರಿವಾರ ಒಡ್ಡಿರುವ ನೇಣಿಗೆ ಕೊರಳೊಡ್ಡುವುದಾದರೆ ನಮ್ಮದೇನೂ ಅಭ್ಯಂತರ ಇಲ್ಲ. ಪರಿಷ್ಕೃತ ಪಠ್ಯಪುಸ್ತಕಗಳ ವಿರುದ್ಧದ ಪ್ರತಿಭಟನೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಕಾಂಗ್ರೆಸ್ ಪಕ್ಷ ಕಟಿಬದ್ದವಾಗಿದೆ ಎಂದು ‌ಸಿದ್ದು ಹೇಳಿದ್ದಾರೆ.