ಪಾದಯಾತ್ರೆಯಲ್ಲಿ ಬಂದು ಇಡಿ ಮುಂದೆ ರಾಹುಲ್ ಗಾಂಧಿ ಹಾಜರ್

ದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನೀಡಲಾದ ಸಮನ್ಸ್ ಆಧರಿಸಿ, ಕಾಂಗ್ರೆಸ್  ನಾಯಕ ರಾಹುಲ್ ಗಾಂಧಿ ಸೋಮವಾರ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾದರು.

ಬೆಳಗ್ಗೆ ತಮ್ಮ ಮನೆಯಿಂದ ಪಾದಯಾತ್ರೆ ಹೊರಟ ರಾಹುಲ್‍ಗಾಂಧಿ ಎರಡು ಕಿಲೋ ಮೀಟರ್‍ವರೆಗೂ ನಡೆದು ಬಂದರು.

ಸಹೋದರಿ ಪ್ರಿಯಾಂಕ ಗಾಂಧಿ ವಾದ್ರ ಅವರು ರಾಹುಲ್ ಗಾಂಧಿಗೆ ಜೊತೆಯಾಗಿದ್ದರು.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್, ಚತ್ತಿಸಗಡದ ಮುಖ್ಯಮಂತ್ರಿ ಭೂಪೇಶ್ ಬಗೇಲಾ, ಹಿರಿಯ ನಾಯಕರಾದ ದಿಗ್ವಿಜಯ್ ಸಿಂಗ್, ಗೌರವ್ ಗೊಗಯ್ ಸೇರಿ ಅನೇಕ ಮಂದಿ ಪಾದಯಾತ್ರೆಗೆ ಜೊತೆಗೂಡಿದ್ದರು.

ಇದೇ ವೇಳೆ ದೆಹಲಿ ಸೇರಿದಂತೆ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ರಾಹುಲ್‍ಗಾಂಧಿ ಪರವಾಗಿ ಹಾಗೂ ಜಾರಿ ನಿರ್ದೇಶನಾಲಯದ ವಿಚಾರಣೆ ವಿರುದ್ಧವಾಗಿ ಪ್ರತಿಭಟನೆಗಳು ನಡೆದವು.

ರಾಹುಲ್‍ಗಾಂಧಿ ಪಾದಯಾತ್ರೆಯಲ್ಲಿ ಸಾವಿರಾರು ಜನ ಜಮಾಯಿಸಿದ್ದರಿಂದ ನೂಕು ನುಗ್ಗಲು ಹೆಚ್ಚಾಯಿತು. ನೂರಾರು ಕಾರ್ಯಕರ್ತರು ರಾಹುಲ್‍ಗಾಂಧಿ ಅವರನ್ನು ಸುತ್ತವರೆದಿದ್ದರು. ಜನಸಂದಣಿ ಮತ್ತು ಪರಿಸ್ಥಿತಿ ಸುಧಾರಿಸಲು ಭದ್ರತಾಪಡೆಗಳು ಹರಸಾಹಸ ಪಟ್ಟವು.

ಭದ್ರತೆಯ ಕಾರಣಕ್ಕೆ ರಾಹುಲ್‍ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರನ್ನು ಕಾರಿನಲ್ಲಿ ಕರೆದೊಯ್ಯಲಾಯಿತು.

ದೆಹಲಿಯ ಇಡಿ ಕಚೇರಿಯಲ್ಲಿ ಮೂವರು ಅಧಿಕಾರಿಗಳು ರಾಹುಲ್ ಗಾಂಧಿಯವರ ವಿಚಾರಣೆ ನಡೆಸಿದರು.